ಕರ್ನಾಟಕ ಸರ್ಕಾರ ಕೇಳದೆ ಇದ್ದರೂ ಕೇಂದ್ರದಿಂದ ಹೆಚ್ಚಿನ ಅನುದಾನ ಘೋಷಣೆ: Shivraj Singh Chouhan

Shivraj Singh Chauhan
Published on

ಬೆಂಗಳೂರು: ಕೃಷಿ, ಗ್ರಾಮೀಣಾಭಿವೃದ್ದಿ, ರೈತ ಕಲ್ಯಾಣ, ಬಡವರ ತಲೆಯ ಮೇಲೊಂದು ಸೂರು ಹೀಗೆ ಹಲವು ಯೋಜನೆಗಳಡಿ ಕರ್ನಾಟಕ ಸರ್ಕಾರ ಕೇಳದೇ ಇದ್ದರೂ ಹೆಚ್ಚಿನ ಅನುದಾನವನ್ನು ಸರ್ಕಾರ ಘೋಷಿಸಿದೆ ಎಂದು ಕೇಂದ್ರ ಸಚಿವ ಶಿವರಾಜ್​ ಸಿಂಗ್​ ಚೌಹಾಣ್​ (Shivraj Singh Chouhan) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಶಿವರಾಜ್​ ಸಿಂಗ್​ ಚೌಹಾಣ್​ (Shivraj Singh Chauhan)​, ಕರ್ನಾಟಕ ವಿಕಾಸಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚಿನ ಆದ್ಯತೆ ನೀಡಿದ್ದಾರೆ. ಪ್ರತಿ ಬಡವನಿಗೂ ಮನೆ ಸಿಗಬೇಕು ಎನ್ನುವುದು ಪ್ರಧಾನಿ ಮೋದಿಯವರ ಸಂಕಲ್ಪವಾಗಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಕರ್ನಾಟಕಕ್ಕೆ 2,57,246 ಮನೆಗಳನ್ನು ಕಟ್ಟಲು ಒಪ್ಪಿಗೆ ನೀಡಿ ಅನುದಾನವನ್ನೂ ಕೊಟ್ಟಿದ್ದೇವೆ. ಕರ್ನಾಟಕದ ಬಡಜನರಿಗೆ ಮನೆ ಕಟ್ಟಲು ಗುರಿಯನ್ನು ಇಂದು ಮತ್ತೆ ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ 4,67,580 ಮನೆಗಳನ್ನು ಕಟ್ಟಲು ಒಪ್ಪಿಗೆ ಕೊಟ್ಟಿದ್ದೇವೆ. ಮನೆಗಳ ನಿರ್ಮಾಣ ಕಾರ್ಯಕ್ಕೆ ವೇಗ ‌ಕೊಡಲು ಸೂಚಿಸಲಾಗಿದೆ. ಹಿಂದೆ ನೀಡಿದ್ದ ಅನುದಾನ ಪೂರ್ತಿ ಬಳಕೆ ಮಾಡಲು ಸೂಚಿಸಲಾಗಿದೆ.

Shivraj Singh Chauhan

ಕರ್ನಾಟಕದ ಅಡಿಕೆ ಬೆಳಗಾರರ ಸಮಸ್ಯೆಗಳ ಪರಿಹಾರಕ್ಕೆ ಅನುದಾನವನ್ನು ರಾಜ್ಯ ಸರ್ಕಾರ ಕೋರಿದೆ. ಅದಕ್ಕಾಗಿ 97 ಕೋಟಿ ರೂ ಬಿಡುಗಡೆ ಮಾಡುತ್ತಿದ್ದೇವೆ. ಸಚಿವರಾದ ಕೃಷ್ಣಬೈರೇಗೌಡ, ಎನ್.ಚಲುವರಾಯಸ್ವಾಮಿ ಹಾಗೂ ಪ್ರಿಯಾಂಕ್ ಖರ್ಗೆ ಭೇಟಿಯಾಗಿ ಒಂದಷ್ಟು ಬೇಡಿಕೆಗಳನ್ನು ಮುಂದಿಟ್ಟಿದ್ದು, ಅದನ್ನೂ ಆದ್ಯತೆ ಮೇರೆಗೆ ಈಡೇರಿಸಲು ಕ್ರಮವಹಿಸಲಾಗುವುದು. ಬಿಡುಗಡೆ ಮಾಡಿರುವ ಹಾಗೂ ಘೋಷಣೆ ಮಾಡಿರುವ ಅನುದಾನವನ್ನು ಕರ್ನಾಟಕ ಸರ್ಕಾರದಿಂದ ಸದ್ಬಳಕೆ ಆಗಲಿ. ಅನುದಾನ ಕೇಳದಿದ್ರೂ ನಾವೇ ಘೋಷಣೆ ಮಾಡಿದ್ದೇವೆ. ಬಹಳಷ್ಟು ಅನುದಾನ ಈಗಾಗಲೇ ಕೊಟ್ಟಿದ್ದು, ಅದನ್ನು ಇನ್ನೂ ಕರ್ನಾಟಕ ಸರ್ಕಾರ ಖರ್ಚು ಮಾಡಿಲ್ಲ.

ಸರ್ವಾನುಮತದಿಂದ ಆಯ್ಕೆ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಆದಷ್ಟು ಬೇಗ ಶುರುವಾಗಲಿದೆ‌. ನಮ್ಮ ಪಕ್ಷದಲ್ಲಿ ಬೂತ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ರಾಜ್ಯಾಧ್ಯಕ್ಷ ಸ್ಥಾನದವರೆಗೂ ಚುನಾವಣೆ ನಡೆಸಿ ಆಯ್ಕೆ ಮಾಡುತ್ತೇವೆ ಎಂದು ಕೇಂದ್ರ ಸಚಿವ ಶಿವರಾಜ್​ ಸಿಂಗ್​ ಚೌಹಾಣ್​ (Shivraj Singh Chouhan)​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net