

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಿಖಿಲ್ ಕುಮಾರಸ್ವಾಮಿ ನಟಿಸುತ್ತಿರುವ ಏದನೇ ಚಿತ್ರದ ಮುಹೂರ್ತ ಕೆಲ ದಿನಗಳ ಹಿಂದಷ್ಟೇ ನೆರವೇರಿತ್ತು. ತಮಿಳಿನ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದು, ‘ಭೂಮಿ’, ‘ಬೋಗನ್’, ‘ರೋಮಿಯೋ ಜೂಲಿಯಟ್’ ಚಿತ್ರಗಳನ್ನು ನಿರ್ದೇಶಿಸಿರುವ ಕಾಲಿವುಡ್ ನಿರ್ದೇಶಕ ಲಕ್ಷ್ಮಣ, ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಕೆಲ ದಿನಗಳಿಂದ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಶನಿವಾರ (ಸೆ. 16) ಶಿವರಾಜಕುಮಾರ್ ಮತ್ತು ಗೀತಾ ದಂಪತಿ ಭೇಟಿ ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಸದ್ಯ ಸಾಹಸ ಸನ್ನಿವೇಶಗಳ ಚಿತ್ರೀಕರಣದಲ್ಲಿ ತೊಡಗಿದ್ದು, ಕೇಬಲ್ ಜಾಕೆಟ್ ಧರಿಸಿದ್ದರು. ಶಿವಣ್ಣ ಮತ್ತು ಗೀತ ದಂಪತಿಯನ್ನು ನೋಡಿದ್ದೇ ತಡ, ಚಿತ್ರೀಕರಣದಿಂದ ಬ್ರೇಕ್ ಪಡೆದು, ಅವರ ಜತೆ ಕೆಲ ಕಾಲ ಕುಶಲೋಪರಿ ಮಾತನಾಡಿದ್ದಾರೆ. ನಿಖಿಲ್ ಸಿನಿಮಾ ಕುರಿತು ಮಾಹಿತಿ ಪಡೆದ ಶಿವರಾಜಕುಮಾರ್, ಶುಭಹಾರೈಸಿದ್ದಾರೆ. ಇನ್ನು ಈ ಚಿತ್ರದಲ್ಲಿ ನಿಖಿಲ್‌ಗೆ ಯುಕ್ತಿ ತರೇಜಾ ನಾಯಕಿಯಾಗಿದ್ದಾರೆ.
ಬಾಲಿವುಡ್ ಗಾಯಕ ಜುಬಿನ್ ನೌಟಿಯಾಲ್ ಜತೆ ‘ಲುಟ್ ಗಯೇ’ ಎಂಬ ಮ್ಯೂಸಿಕ್ ವಿಡಿಯೋ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದ ಯುಕ್ತಿ, ನಂತರ ತೆಲುಗಿನ ‘ರಂಗಬಲಿ’ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ಇದೀಗ ನಿಖಿಲ್‌ಗೆ ಜೋಡಿಯಾಗಿದ್ದಾರೆ.