ವನಕೊಡ್ಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ

pooje
Published on

ಬೈಂದೂರು: ಬೈಂದೂರು ಗ್ರಾಮದ ವನಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಬುಧವಾರ ಹೆಚ್ಚಿನ ಸಂಖ್ಯೆಯ ಭಕ್ತರು ಪ್ರಾತಃಕಾಲದಿಂದಲೇ ದೇವಳಕ್ಕೆ ಆಗಮಿಸಿ ಪುಷ್ಕರಿಣಿಯಲ್ಲಿ ಸ್ನಾನ ಮಾಡಿ ಬಂದು ಶಿವಲಿಂಗ ಮುಟ್ಟಿ ಆರಾಧನೆ, ಅರ್ಚನೆ ಮಾಡಿದರು. ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಡಾ.ಯಡ್ತರೆ ರಾಜಮೋಹನ ಶೆಟ್ಟಿ ನೇತೃತ್ವದಲ್ಲಿ ಉತ್ಸವ ವೈಭವದಿಂದ ನೆರವೇರಿತು.

ಜಾತಿ, ಮತ, ಭೇದವಿಲ್ಲದೆ ಸರ್ವ ಭಕ್ತರಿಗೂ ದೇಗುಲದ ಗರ್ಭಗುಡಿ ಪ್ರವೇಶಿಸಿ ಶಿವ ಮೂರ್ತಿ ಸ್ಪರ್ಶಿಸಿ, ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗುವ ಅವಕಾಶವಿದೆ. ಆದರೆ ಇತ್ತೀಚೆಗೆ ದೇಗುಲದಲ್ಲಿ ದೈವಜ್ಞ ಶ್ರೀ ಬೇಳ ಪದ್ಮನಾಭ ಶರ್ಮ ಇರಿಂಜಾಲಕ್ಕುಡ ಅವರ ನೇತೃತ್ವದಲ್ಲಿ ನಡೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯಂತೆ ಮಹಾಶಿವರಾತ್ರಿ ದಿನದಂದು ಗರ್ಭಗುಡಿ ಪ್ರವೇಶಿಸಿ ಶಿವಲಿಂಗ ಮುಟ್ಟಿ ಪೂಜೆ ಮಾಡುವ ಭಕ್ತರು ದೇಗುಲದ ಪುಷ್ಕರಿಣಿಯಲ್ಲಿ ತೀರ್ಥಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ ಶಿವಲಿಂಗ ಮುಟ್ಟಿ ಪೂಜೆ ಮಾಡಬೇಕೆಂದು ಕಂಡು ಬಂದಿರುವುದರಿಂದ ಈ ಬಾರಿ ಶಿವರಾತ್ರಿ ದಿನದಂದು ಮುಟ್ಟಿ ಪೂಜೆಯಲ್ಲಿ ಕೊಂಚ ಬದಲಾವಣೆ ಮಾಡಲಾಗಿತ್ತು. ಒಂದು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ 10ನೇ ಶತಮಾನದಲ್ಲಿ ನಿರ್ಮಿಸಲಾದ ಗೋಕರ್ಣ ಹೊರತುಪಡಿಸಿದರೆ ಭಕ್ತರು ಶಿವಲಿಂಗ ಮುಟ್ಟಿ ಪೂಜೆ ಮಾಡುವ ರಾಜ್ಯದ ಎರಡನೇ ದೇವಾಲಯ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net