ಗಂಗೊಳ್ಳಿ: ಸೀಯಾಳ(ಬೊಂಡ) ದರ 60 ರೂ. ಗಡಿ ತಲುಪಿದೆ. ಆದರೂ ಬೊಂಡಕ್ಕೆ ಬೇಡಿಕೆ ಕಡಿಮೆಯಾಗಿಲ್ಲ. ಬೇಡಿಕೆ ಇದ್ದಷ್ಟು ಎಲ್ಲಿಯೂ ಎಳನೀರು ಇಲ್ಲ.
ಬೆಳಗ್ಗೆ ಸ್ವಲ್ಪ ಪ್ರಮಾಣದಲ್ಲಿ ಬಂದ ಸೀಯಾಳ ಬೇಗನೆ ಮುಗಿದು ಹೋಗುತ್ತದೆ. ಬೆಳಗ್ಗೆ 11 ಗಂಟೆಗೆ ಎಳನೀರು ಲಭ್ಯವಿಲ್ಲ ಎನ್ನುವ ಉತ್ತರ ವ್ಯಾಪಾರಿಗಳಿಂದ ದೊರೆಯುತ್ತದೆ. ಇದರಿಂದಾಗಿ ವ್ಯಾಪಾರಿಗಳು ತಾತ್ಕಾಲಿಕವಾಗಿ ಅಂಗಡಿ ಮುಚ್ಚಿದ್ದಾರೆ.

ದಾಖಲೆ ದರ
ಈ ಬಾರಿಯ ಸೀಜನ್‌ನಲ್ಲಿ ಹಿಂದಿನ ಎಲ್ಲ ದಾಖಲೆ ಬದಿಗಟ್ಟಿ ಎಳನೀರಿನ ಬೆಲೆ ಗಗನಕ್ಕೆ ತಲುಪಿದೆ. ಒಂದು ಸೀಯಾಳದ ಬೆಲೆ 25ರಿಂದ 30 ಇದ್ದು, ಈಗ 60 ರೂ.ವರೆಗೆ ಏರಿಕೆಯಾಗಿದೆ. ಸೀಯಾಳಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ಅಂಗಡಿಯವರು ದರ ಏರಿಕೆ ಮಾಡುತ್ತಿದ್ದಾರೆ. ಗ್ರಾಹಕರು ಸೀಯಾಳ ಮಾರಾಟ ಅಂಗಡಿಯಲ್ಲಿ ಕಾಯುತ್ತಿದ್ದರೆ, ಎಳನೀರು ಅನಿವಾರ್ಯ ಇರುವ ರೋಗಿಗಳಿಗೆ ಎಲ್ಲೆಲ್ಲೂ ಸುತ್ತಾಡುವುದೇ ಕೆಲಸ. ಶುಭ ಕಾರ್ಯಗಳಿಗೆ ಸೀಯಾಳ ಹುಡುಕಿಕೊಂಡು ಹೋಗುವುದು ಅನಿವಾರ್ಯವಾಗಿದೆ.