

ಬೆಂಗಳೂರು; ಕನ್ನಡ ಚಲನಚಿತ್ರದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್(Shivanna) ಕ್ಯಾನ್ಸರ್ನಿಂದ ಬಳಲುತ್ತಿದ್ದು, ಅವರಿಗೆ ಇಂದು(ಡಿ.24) ಅಮೆರಿಕಾದ ಮಿಯಾಮಿಯ ಆಸ್ಪತ್ರೆಯಲ್ಲಿ ಸರ್ಜರಿ ನಡೆಯುತ್ತಿದೆ. ಈ ಹಿನ್ನೆಲೆ ಶಿವಣ್ಣ ಬೇಗ ಗುಣಮುಖರಾಗಲೆಂದು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಲ್ಲೇಶ್ವರಂನ ಕರ್ನಾಟಕ ರತ್ನ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಅವರ ಆರೋಗ್ಯ ಸುಧಾರಣೆಯಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ಅಖಿಲ ಕರ್ನಾಟಕ ಡಾ.ಶಿವರಾಜ್ ಕುಮಾರ್ ಸೇನಾ ಸಮಿತಿ ಅಧ್ಯಕ್ಷ ಟಿ.ನಾರಾಯಣ್ ಹಾಗೂ ಹಿರಿಯ ಅಭಿಮಾನಿಗಳಾದ ಬೀಡ ಜರ್ನಾಧನ, ಸೋಮಣ್ಣ, ಗೆದ್ದಲಹಳ್ಳಿ ರಾಜು, ಪ.ರಾ. ರಾಘವೇಂದ್ರ ಹಾಗೂ ಗಂಡುಗಲಿ ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಗಾಂಧಿನಗರ ಅಧ್ಯಕ್ಷ ಎಂ. ಮಲ್ಲ ಇತರರಿದ್ದರು.
ಅಖಿಲ ಕರ್ನಾಟಕ ಡಾ ಶಿವರಾಜ್ ಕುಮಾರ್ ಸೇನಾ ಸಮಿತಿ ಮತ್ತು ಗಾಂಧಿನಗರದ ಗಂಡುಗಲಿ ಡಾ. ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ, ಶಿವಣ್ಣ ಆರೋಗ್ಯ ಬೇಗ ಗುಣಮುಖವಾಗಲಿ ಎಂದು ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯ ಸುಪ್ರಸಿದ್ಧ ದೇವಾಲಯ ಶ್ರೀ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಶ್ರೀ ಮಹಾ ಮೃತ್ಯುಂಜಯ ಹೋಮ ಮತ್ತು ಮಹಾ ರುದ್ರಾಭಿಷೇಕ ಪೂಜೆ ನೆರವೇರಿತು.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧ ಭಾಗಗಳಲ್ಲಿ ಶಿವಣ್ಣ ಆರೋಗ್ಯಕ್ಕಾಗಿ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಇನ್ನು ಶಿವರಾಜ್ ಕುಮಾರ್ ಮತ್ತಿ ಪತ್ನಿ ಗೀತಾ ಇದೇ ಡಿ.18ರಂದು ಅಮೆರಿಕಾಕ್ಕೆ ತೆರಳಿದಿದ್ದಾರೆ. ಅಮೆರಿಕಾ ಹೋಗುವ ಮೊದಲು ಕನ್ನಡ ಚಿತ್ರರಂಗದ ಹಲವು ಗಣ್ಯರು ಶಿವಣ್ಣ ಮನೆಗೆ ಭೇಟಿ ನೀಡಿ ಶುಭ ಹಾರೈಸಿದರು. ಅಲ್ಲದೆ, ಈ ಮುಂಚೆ ಶಿವಣ್ಣ ಮತ್ತು ಗೀತಾ ಅವರು ವಿವಿಧ ದೇವಾಲಗಳಿಗೆ ಭೇಟಿ ಪ್ರಾರ್ಥನೆ ಸಲ್ಲಿಸಿದ್ದರು.