

ಸೊರಬ: ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಆಗಬೇಕಾದರೆ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದೊಂದಿಗೆ ಜನರಲ್ಲಿರುವ ಮೌಢ್ಯ ದೂರವಾಗಬೇಕು ಎಂದು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಮಂಜುನಾಥ್ ನಾರಾಯಣ ನಾಯ್ಕ ಹೇಳಿದರು.
ಪಟ್ಟಣದಲ್ಲಿ ತಾಲೂಕು ಆಡಳಿತ, ಕುಟುಂಬ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಎಚ್‌ಪಿಆರ್ ಪ್ಯಾರಾಮೆಡಿಕಲ್‌ನಿಂದ ಆಯೋಜಿಸಿದ್ದ ವಿಶ್ವ ಜನಸಂಖ್ಯೆ ದಿನಾಚರಣೆಯಲ್ಲಿ ಮಾತನಾಡಿ, ಒಂದು ಕುಂಟುಂಬಕ್ಕೆ ಒಂದೇ ಮಗು ಎಂದು ಘೋಷಣೆ ಮಾಡಿದ ನೀತಿ ಸಫಲವಾಗಲಿಲ್ಲ. ಅದು ಇಂದು ಜಾರಿಯಾಗಬೇಕು. ಪ್ರಸ್ತುತ ದಿನದಲ್ಲಿ ಯುವಜನತೆಗೆ ಜನಸಂಖ್ಯೆ ನಿಯಂತ್ರಣ ಕುರಿತು ಶಿಕ್ಷಣ ಮತ್ತು ರಾಜಕಾರಣದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ಹಿರಿಯ ವಕೀಲ ವೈ.ಜಿ.ಪುಟ್ಟಸ್ವಾಮಿ ಮಾತನಾಡಿ, ಕುಟುಂಬದಲ್ಲಿ ಸುಸ್ಥಿರ ಜನಸಂಖ್ಯೆ ಕಾಯ್ದುಕೊಂಡು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಜನಸಂಖ್ಯೆಯಿಂದ ಆಹಾರ, ಶಿಕ್ಷಣ, ಸಾರಿಗೆ ಹಾಗೂ ವಸತಿ ಸಮಸ್ಯೆ ಹೆಚ್ಚಾಗಿ ದೇಶದ ಭವಿಷ್ಯಕ್ಕೆ ಸಮಸ್ಯೆಯಾಗಲಿದೆ ಎಂದು ತಿಳಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ. ಟಿ.ಎಚ್.ನೂತನ್ ನಾಯ್ಕ ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ಕುಟುಂಬ ನಿಯಂತ್ರಣ ಯೋಜನೆ ಪಾಲನೆ ಮಾಡುವುದರಿಂದ ಜನಸಂಖ್ಯೆ ನಿಯಂತ್ರಿಸಬಹುದು ಎಂದರು.
ತಹಸೀಲ್ದಾರ್ ಮಂಜುಳಾ ಹೆಗಡಾಳ್ ಕಾರ್ಯಕ್ರಮ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ, ನಾಮಿನಿ ಸದಸ್ಯರಾದ ಶಿವಪ್ಪ, ದಾನಪ್ಪ, ಪರುಶುರಾಮ, ಡಾ. ಶಿವಯೋಗಿ, ಕ್ಷೇತ್ರ ಆರೋಗ್ಯಾಧಿಕಾರಿ ಪದ್ಮಾವತಿ, ಶಬ್ಬೀರ್ ಖಾನ್, ಯಶವಂತ್, ಸರಸ್ವತಿ, ಹಸೀನಾ ಬಾನು ಇತರರಿದ್ದರು.