ತೀರ್ಥಹಳ್ಳಿ: ಮನುಷ್ಯನ ಜೀವನದಲ್ಲಿ ಸರಿ-ತಪ್ಪುಗಳ ವಿಮರ್ಶೆಗೆ ವೈಚಾರಿಕ ಚಿಂತನೆ ಅಗತ್ಯ. ಆದರೆ ಚಿಂತನೆ ಹೊಡೆದಾಟದ ಹಂತ ತಲುಪಬಾರದು. ಇನ್ನೊಬ್ಬರ ನಿಂದನೆ ಮತ್ತು ಶಕ್ತಿಹೀನ ಮಾಡುವ ಹಂತಕ್ಕೂ ಹೋಗಬಾರದು ಎಂದು ಉಡುಪಿ ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ಸ್ವಾಮೀಜಿ ಹೇಳಿದರು.

ತಾಲೂಕು ಬ್ರಾಹ್ಮಣ ಸಮಾಜದ ಹಿರಿಯರ ಬಳಗದಿಂದ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಆಯೋಜಿಸಿದ್ದ ಧಾರ್ಮಿಕ ಪ್ರವಚನದಲ್ಲಿ ಭಾರತೀಯರ ಬದುಕಿನಲ್ಲಿ ಸನಾತನ ಧರ್ಮದ ಮಹತ್ವ- ನಿನ್ನೆ, ಇಂದು ಮತ್ತು ನಾಳೆ ಕುರಿತು ಆಶೀರ್ವಚನ ನೀಡಿದ ಅವರು, ಧರ್ಮ ರಕ್ಷಣೆಯೊಂದಿಗೆ ಸರ್ವೇಜನಾಃ ಸುಖಿನೋ ಭವಂತು ಎಂಬ ಮೂಲ ಮಂತ್ರದಂತೆ ಸಜ್ಜನರ ಹಿತ ಬಯಸುವುದೇ ಸನಾತನ ಧರ್ಮದ ಆಶಯ. ಅದರಂತೆ ನಡೆಯುವುದು ಮುಖ್ಯ ಎಂದು ತಿಳಿಸಿದರು.
ಭಗವಂತನಲ್ಲಿ ನಾವು ಬೇಡುವ ಅಗತ್ಯವಿಲ್ಲ. ಅವನಿಗೆ ಎಲ್ಲವೂ ತಿಳಿದಿದೆ. ದೇವಸ್ಥಾನಗಳಲ್ಲಿ ಪ್ರಾರ್ಥಿಸುವುದು ನಮ್ಮ ಕರ್ತವ್ಯ. ಸನಾತನ ಧರ್ಮದಲ್ಲಿ ಧರ್ಮವನ್ನು ಹೀಗೆ ಆಚರಣೆ ಮಾಡಬೇಕೆಂಬ ಚೌಕಟ್ಟಿಲ್ಲ. ಅವರವರ ಯೋಗ್ಯತಾನುಸಾರ ನಿರ್ವಹಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಸನಾತನ ಧರ್ಮದ ಬೇರು ನಮ್ಮಲ್ಲಿದೆಯೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವ ಅಗತ್ಯವಿದೆ ಎಂದರು.
ಶಾಸಕ ಆರಗ ಜ್ಞಾನೇಂದ್ರ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ತುಂಬ್ರಮನೆ ಚಂದ್ರಶೇಖರ್, ಬ್ರಾಹ್ಮಣ ಸಮಾಜದ ಹಿರಿಯರ ಬಳಗದ ಸಂಚಾಲಕ ಡಾ. ಎನ್.ಎಸ್.ಮನೋಹರ ರಾವ್, ಸಂಘದ ಮಾಜಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್, ಡಾ. ಬಿ.ಜಿ.ನಂದಕಿಶೋರ್, ಡಾ. ಜೀವಂಧರ ಜೈನ್ ಉಪಸ್ಥಿತರಿದ್ದರು.
ಸನಾತನ ಧರ್ಮ ಪ್ರಕೃತಿಗೆ ಹತ್ತಿರವಾದುದು. ಪರಿಸರದ ರಕ್ಷಣೆಯೊಂದಿಗೆ ಹೊಂದಿಕೊಂಡು ಬದುಕು ಸಾಗಿಸಬೇಕಾದ ಮನುಷ್ಯ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುವ ಪ್ರಯತ್ನ ಸುರಕ್ಷಿತವಲ್ಲ. ಮನುಷ್ಯನ ನಿರೀಕ್ಷೆಗೆ ವಿರುದ್ಧ ಬೆಳವಣಿಗೆ ಸಂಭವಿಸಿದಲ್ಲಿ ಆಗುವ ಅನಾಹುತ ಊಹೆಗೆ ನಿಲುಕದ್ದು.
ಶ್ರೀ ಈಶಪ್ರಿಯ ಸ್ವಾಮೀಜಿ
ಉಡುಪಿ ಅದಮಾರು ಮಠ
ಪ್ರಥಮ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಶ್ರೀಗಳನ್ನು ಗಾಯತ್ರಿ ಮಂದಿರದ ಬಳಿ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಪಟ್ಟಣಕ್ಕೆ ಆಗಮಿಸಿದ ಶ್ರೀಗಳು ಪಟ್ಟಣದಲ್ಲಿರುವ ರೋಟರಿ ರಕ್ತನಿಧಿ ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಕ್ತನಿಧಿ ಬ್ಯಾಂಕ್ ಮುಖ್ಯಸ್ಥ ಡಾ. ಬಿ.ಜಿ.ನಂದಕಿಶೋರ್ ಇದ್ದರು.