ಮನುಕುಲದ ಉನ್ನತಿಯೇ ಧರ್ಮಗಳ ಸಾರ

10 HHR P 05
ಹೊಳೆಹೊನ್ನೂರು ಸಮೀಪದ ಹೊಳೆಹಟ್ಟಿ ಹಳೇ ಗ್ರಾಮದಲ್ಲಿ ದೇವಾಲಯಗಳ ಆಲಯ ಪ್ರವೇಶ, ಕಳಸಾರೋಹಣ ಕಾರ್ಯಕ್ರಮದ ಧರ್ಮಸಭೆಯನ್ನು ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್ ಉದ್ಘಾಟಿಸಿದರು. ಶ್ರೀ ರಂಭಾಪುರಿ ಜಗದ್ಗುರುಗಳು, ಶ್ರೀ ಶಿವ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಪುಟ್ಟಯ್ಯ ಶಾಸ್ತ್ರಿ ಇತರರಿದ್ದರು.
Published on

ಹೊಳೆಹೊನ್ನೂರು: ಧರ್ಮಕ್ಕೆ ಸಾವಿಲ್ಲ ಎನ್ನುವುದು ಸಾರ್ವಕಾಲಿಕ ಸತ್ಯ. ಭಾರತ ದೇಶ ಧರ್ಮ ಪ್ರಧಾನ ದೇಶ. ಪರಂಪರೆಗಳಲ್ಲಿ ವೈವಿಧ್ಯತೆ ಮೆರೆಯುತ್ತಿದೆ. ಸಾಮರಸ್ಯ ಭಾವನೆ ರಾಷ್ಟ್ರೀಯತೆಗೆ ಶಕ್ತಿ ನೀಡುತ್ತದೆ ಎಂದು ಬಾಳೆಹೊನ್ನೂರು ಡಾ. ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಸಮೀಪದ ಹೊಳೆಹಟ್ಟಿ ಹಳೇ ಗ್ರಾಮದಲ್ಲಿ ಶ್ರೀ ರಂಗನಾಥ ಸ್ವಾಮಿ, ಶ್ರೀ ಕಾಡ ವೀರಭದ್ರೇಶ್ವರ, ಪಾರ್ವತಿ ದೇವಸ್ಥಾನಗಳ ಪ್ರವೇಶ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಆರ್ಶಿವಚನ ನೀಡಿದ ಅವರು, ಪ್ರತಿಯೊಂದೂ ಧರ್ಮಗಳ ಆಚರಣೆ ಬೇರೆಯಾಗಿದ್ದರೂ ಕೊನೆಯ ಗುರಿ ಮಾನವ ಕುಲದ ಉನ್ನತಿಯೇ ಆಗಿದೆ ಎಂದು ತಿಳಿಸಿದರು.

ದೇಶದಲ್ಲಿ ಧರ್ಮ, ಜಾತಿಗಳ ನಡುವೆ ಸಂಘರ್ಷಗಳು ತಾರಕಕ್ಕೇರುತ್ತಿವೆ. ಧರ್ಮದ ಹೆಸರಿನಲ್ಲಿ ಜಾತಿಯೊಂದರ ಆರ್ಭಟ ಜೊರಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜಾತಿಗಳಿಗಿಂತ ಧರ್ಮಕ್ಕೆ ಪ್ರಾಧಾನ್ಯತೆ ದೊರಕಬೇಕು. ಮನುಷ್ಯ ಭೌತಿಕವಾಗಿ ಉನ್ನತಿಯಾಗಿದ್ದರೂ ಮಾನಸಿಕ ನೆಮ್ಮದಿ ಮಾತ್ರ ಮರೀಚಿಕೆಯಾಗಿದೆ. ಆಸ್ತಿಕ ಭಾವ ವೃದ್ಧಿಯಾಗಿ ಧರ್ಮಾಚರಣೆ ಮುಖ್ಯವಾಗಬೇಕಿದೆ ಎಂದರು.

ಹೊಳೆಹಟ್ಟಿಯ ತುಂಗಭದ್ರಾ ನದಿ ದಂಡೆಯಲ್ಲಿ 2 ಎಕರೆ ಜಾಗ ಗುರುತಿಸಿ ವೇದ ಪಾಠಶಾಲೆ ತೆರೆಯಲು ಚಿಂತಿಸಲಾಗಿದೆ. ಭೂಮಿ ಮಂಜೂರಾದರೆ ವೇದ ಗುರುಕುಲ ಸ್ಥಾಪಿಸಲಾಗುವುದು. ತುಂಗಭದ್ರಾ ನದಿ ದಂಡೆಯ ಪ್ರಶಾಂತ ವಾತಾವರಣ ಗುರುಕುಲ ಸ್ಥಾಪನೆಗೆ ಪ್ರಶಸ್ತವಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳು ರಂಭಾಪುರಿ ಪೀಠ, ಬಾಳೆಹೊನ್ನೂರು

ಉಪಕಾರ ಸ್ಮರಣೆ ಮರೆಯಬಾರದು. ಧರ್ಮಚಾರಣೆಯಲ್ಲಿ ಅಘೋಚರ ಶಕ್ತಿ ಅಡಗಿದೆ. ದೈವದಲ್ಲಿ ವಿಶ್ವಾಸ ಹಾಗೂ ನಂಬುಗೆ ಹೊಂದಿರಬೇಕು. ಜಾತಿ ಕಲಹಗಳನ್ನು ಬದಿಗಿಟ್ಟು ಒಂದಾಗಿ ಬಾಳಿದರೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಗ್ರಾಮದ ದೇವಸ್ಥಾನಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪೂಜಾ ಕೈಂಕರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ದೇವಸ್ಥಾನಗಳು ಆಧ್ಯಾತ್ಮಿಕ ತಾಣಗಳಾಗಿ ಬಳಕೆಯಾಗಬೇಕಿದೆ ಎಂದು ಹೇಳಿದರು.

ಧರ್ಮ ಜನರ ಮನದಾಳಕ್ಕೆ ತಲುಪಬೇಕು. ಇತ್ತೀಚಿನ ದಿನಗಳಲ್ಲಿ ಧರ್ಮಕ್ಕೆ ಪೆಟ್ಟು ಬೀಳುತ್ತಿದೆ. ಧರ್ಮಗಳ ಮಧ್ಯೆ ಭೇದಭಾವಗಳು ಸಂಘರ್ಷಕ್ಕೆ ಎಡೆ ಮಾಡುತ್ತಿವೆ. ಮಾನವ ಧರ್ಮ ಶ್ರೇಷ್ಠವಾದದು. ಪ್ರತಿಯೊಬ್ಬರು ಬೌದ್ಧಿಕ ಶಕ್ತಿ ಅರಿತು ಕಾರ್ಯಪ್ರವೃತರಾಗಬೇಕು. ಮನೆಗಳಲ್ಲಿ ಮಾತೆಯರಿಂದ ದೊರೆಯುವ ಶಿಕ್ಷಣ ವಿಶ್ವವಿದ್ಯಾಲಯಗಳಲ್ಲೂ ಸಿಗುವುದಿಲ್ಲ. ವಿಶ್ವ ಧರ್ಮ ಪ್ರಜ್ಞೆ ಬೆಳೆಸಿಕೊಳ್ಳಬೇಕು. ನಟೇಶ್ ವಾಗ್ಮಿ

ಗ್ರಾಮದ ಮುಖಂಡ ಕಾಡವೀರಪ್ಪ ಮಾತನಾಡಿ, ತುಂಗಭದ್ರಾ ನದಿ ಪಕ್ಕದಲ್ಲಿ ಗ್ರಾಮ ಇರುವುದರಿಂದ ಹೊಳೆಹಟ್ಟಿ ಎಂಬ ಹೆಸರು ಬಂದಿದೆ. ಹೊಯ್ಸಳರ ಕಾಲದ ದೇವಸ್ಥಾನ ಶಿಥಿಲವಾದ ಕಾರಣ ಗ್ರಾಮಸ್ಥರ ಸಹಕಾರದಿಂದ ದೇವಸ್ಥಾನ ನಿರ್ಮಿಸಲಾಯಿತು ಎಂದು ತಿಳಿಸಿದರು.

ತಡೆಗೋಡೆ, ಸೋಪಾನ ಕಟ್ಟೆ ನಿರ್ಮಾಣಕ್ಕೆ ಅನುದಾನ ನೀಡಲು ಹಾಗೂ ರಂಭಾಪುರಿ ಜಗದ್ಗುರುಗಳ ಇಚ್ಛೆಯಂತೆ ಹೊಳೆಹಟ್ಟಿಯಲ್ಲಿ ವೇದ ಪಾಠಶಾಲೆ ತೆರೆಯಲು ಜಾಗ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಧರ್ಮಸಭೆಗಳಿಂದ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ. ಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಸಮಾಜದ ಋಣ ತೀರಿಸುವುದು ನಮ್ಮೆಲ್ಲರ ಜವಾಬ್ದಾರಿ. ಶಾರದಾ ಪೂರ‌್ಯಾನಾಯ್ಕ ಗ್ರಾಮಾಂತರ ಶಾಸಕಿ

ಗ್ರಾಮದಿಂದ ವಿವಾಹ ಮಾಡಿಕೊಟ್ಟ ಹೆಣ್ಣು ಮಕ್ಕಳನ್ನು ತವರೂರಿನ ದೇವಸ್ಥಾನದ ಗೃಹ ಪ್ರವೇಶಕ್ಕೆ ಕರೆದು, ಬಾಗಿನ ನೀಡಲಾಯಿತು. ಚನ್ನಗಿರಿ ಹಿರೆಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಹಾರ‌್ನಳ್ಳಿ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್, ಪ್ರತಿಭಾ ಪ್ರಸನ್ನಕುಮಾರ್, ಬಿ.ಕೆ.ಶೇಖರಪ್ಪ, ಚಂದ್ರಪ್ಪ, ಹನುಮಂತಪ್ಪ, ಪುಟ್ಟಯ್ಯಶಾಸ್ತ್ರಿ, ಸಿದ್ದಪ್ಪ, ರಾಜಪ್ಪ, ಕಾಡವೀರಪ್ಪ, ಸಿ.ಎಚ್.ಜಯಪ್ಪ, ಪಿ.ಡಿ.ಚಿಕ್ಕಪ್ಪ, ನೇತ್ರಾವತಿ ವೀರೇಶ್, ರಂಗನಾಥ್, ಬೂದಿಸ್ವಾಮಿ ಇತರರಿದ್ದರು.

ತಡೆಗೋಡೆ ನಿರ್ಮಾಣಕ್ಕೆ ಪ್ರಯತ್ನ: ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್ ಕುಟುಂಬ ಸಮೇತ ಮೂರು ದಿನ ದೇವಸ್ಥಾನದ ಆಲಯ ಪ್ರವೇಶ ಸೇರಿ ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದರು. ಧರ್ಮಸಭೆಯಲ್ಲಿ ಮಾತನಾಡಿ, ಮನೆ ದೇವರು ಹೊಳೆಹಟ್ಟಿ ರಂಗನಾಥ ಸ್ವಾಮಿ ದೇವಸ್ಥಾನದ ಜಿರ್ಣೋದ್ಧಾರದ ಬಗ್ಗೆ ಮೆಲುಕು ಹಾಕುವಾಗ ಎದುರಾದ ಸಂಕಷ್ಟಗಳನ್ನು ನೆನೆದು ಕಣ್ಣೀರಿಟ್ಟರು. ಬಾಳೆಹೊನ್ನೂರು ಶ್ರೀಗಳು ಸಂತೈಸಿದರು. ಶ್ರೀ ಕಾಡ ವೀರಭದ್ರೇಶ್ವರ ದೇವಸ್ಥಾನ ಬಳಿ ತಡೆಗೋಡೆ ನಿರ್ಮಾಣ ಸೇರಿ ಗ್ರಾಮಾಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಆರ್.ಪ್ರಸನ್ನಕುಮಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net