ಶಿಕಾರಿಪುರ: ಆಪರೇಷನ್ ಸಿಂಧೂರ ಯಶಸ್ಸಿನ ಹಿನ್ನೆಲೆಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಲು ಬಿಜೆಪಿಯಿಂದ ಶಿಕಾರಿಪುರದಲ್ಲಿ ತಿರಂಗಾ ಯಾತ್ರೆ ನಡೆಸಲಾಯಿತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಕ್ಷದ ಕಾರ್ಯಕರ್ತರೊಂದಿಗೆ ಡಾ. ಅಂಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿವರೆಗೂ ಹೆಜ್ಜೆ ಹಾಕಿದರು. ಸೈನಿಕರು ಕೂಡ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾರತೀಯ ಸೇನೆ ಹಾಗೂ ಬಿಜೆಪಿ, ಮೋದಿ ಪರ ಘೋಷಣೆ ಕೂಗಿದರು.
ಬಿ.ವೈ.ವಿಜಯೇಂದ್ರ ಮಾತನಾಡಿ, ದೇಶದ ಸಮಗ್ರತೆ ಮತ್ತು ಅಖಂಡತೆಗೆ ಧಕ್ಕೆಯಾದರೆ, ಧರ್ಮದ ಹೆಸರಿನಲ್ಲಿ ಹತ್ಯೆ ಮಾಡಲು ಮುಂದಾದರೆ ಅಂತಹ ಉಗ್ರರನ್ನು ಯಾವ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎನ್ನುವುದನ್ನು ಆಪರೇಷನ್ ಸಿಂಧೂರ ಜಗತ್ತಿಗೆ ನಿರೂಪಿಸಿದೆ ಎಂದು ಹೇಳಿದರು.
ಭಾರತೀಯರ ಸೈನಿಕರ ಯಶೋಗಾಥೆಯನ್ನು ವಿಶ್ವವೇ ನೋಡಿದೆ. ಸೈನಿಕರ ಶೌರ್ಯ, ಪರಾಕ್ರಮ, ಸಾಹಸ ಮನೋಭಾವಕ್ಕೆ ಪಾಕಿಸ್ತಾನ ಹೆದರಿದೆ. ದೇಶಕ್ಕಾಗಿ ಹೋರಾಡುತ್ತಿರುವ ಸೈನಿಕರ ಸಂಕಲ್ಪ ಶಕ್ತಿ ಅದ್ಭುತ ಎಂದು ಬಣ್ಣಿಸಿದರು.
ಭಾರತೀಯ ಸೈನಿಕರ ಶಕ್ತಿ, ಸಾಮರ್ಥ್ಯವನ್ನು ಜಗತ್ತು ಬೆರಗುಗಣ್ಣಿನಿಂದ ನೋಡುತ್ತಿದೆ. ಎಂತಹ ಕಷ್ಟಕರ ಪರಿಸ್ಥಿತಿ ಬಂದರೂ ಎದುರಿಸಲು ಭಾರತ ಸಮರ್ಥವಾಗಿದೆ. ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಭಾರತ ವಿಶ್ವದ ಶಕ್ತಿಶಾಲಿ ರಾಷ್ಟ್ರವಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತ ಪ್ರಕಾಶಿಸುತ್ತಿದೆ.
ಬಿ.ವೈ.ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ
ರಾಷ್ಟ್ರೀಯ ಅಧ್ಯಕ್ಷರ ಆದೇಶದಂತೆ ತಿರಂಗಾ ಯಾತ್ರೆ ದೇಶಾದ್ಯಂತ ನಡೆಯಲಿದೆ. ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತಿಯಾಗಿ ಆಪರೇಷನ್ ಸಿಂಧೂರ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಅಚ್ಚುಕಟ್ಟಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಉಗ್ರರು ಮತ್ತು ಪಾಕಿಸ್ತಾನಕ್ಕೆ ನಮ್ಮ ಸೈನಿಕರು ಎಚ್ಚರಿಕೆ ಸಂದೇಶ ನೀಡಿದ್ದಾರೆ ಎಂದರು.
ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್, ಉಪಾಧ್ಯಕ್ಷೆ ರೂಪಾ ಮಂಜುನಾಥ್, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ರಾಮಾ ನಾಯಕ್, ಹನುಮಂತಪ್ಪ, ಹುಲ್ಮಾರ್ ಮಹೇಶ್, ವೀರನಗೌಡ, ಪ್ರವೀಣ್, ನಿವೇದಿತಾ ರಾಜು, ಮಾಜಿ ಸೈನಿಕ ಕಪ್ಪನಹಳ್ಳಿ ಬಸವರಾಜ್, ಧಾರವಾಡ ಗಿರೀಶ್, ವಿಶ್ವನಾಥ್, ಬೇಗೂರು ಮಂಜುನಾಥ್ ಇತರರಿದ್ದರು.