ರಿಪ್ಪನ್‌ಪೇಟೆ: ಗ್ರಂಥಾಲಯಗಳ ನಿರ್ಮಾಣದಿಂದ ಜನರು ಹೆಚ್ಚಿನ ಅಧ್ಯಯನ ಮಾಡಲು ಸಾಧ್ಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಮೀಪದ ಬಾಳೂರು ಗ್ರಾಪಂನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗ್ರಂಥಾಲಯ ಮತ್ತು ಮಾಹಿತಿ ಅರಿವು ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಅಗತ್ಯ ಪುಸ್ತಕಗಳ ಜತೆಗೆ ಅಂತರ್ಜಾಲದ ಮೂಲಕವು ಮಾಹಿತಿ ಸಂಗ್ರಹಿಸುವ ತಾಂತ್ರಿಕ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮೀಣ ಭಾಗದ ಮಹಿಳೆಯರು ಮತ್ತು ಯುವಜನರು ಟಿವಿ, ಮೊಬೈಲ್‌ಗಳಿಂದ ದೂರವಿದ್ದು, ಪುಸ್ತಕ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಜನರು ದೈನಂದಿನ ಚಟುವಟಿಕೆಗಳ ಜತೆಗೆ ಬಿಡುವಿನ ಸಮಯದಲ್ಲಿ ಗ್ರಂಥಾಲಯಕ್ಕೆ ಬಂದು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಜ್ಞಾನ ಭಂಡಾರದಲ್ಲಿನ ಪುಸ್ತಕಗಳ ಅಧ್ಯಯನ ಗ್ರಾಮದ ಚಿತ್ರಣವನ್ನೇ ಬದಲಾಯಿಸುತ್ತದೆ. ಮೊದಲು ಪಟ್ಟಣಕ್ಕೆ ಮಾತ್ರ ಸೀಮಿತವಾಗಿದ್ದ ಗ್ರಂಥಾಲಯಗಳನ್ನು ಈಗ ಗ್ರಾಮೀಣ ಹಂತದ ಪ್ರತಿ ಗ್ರಾಪಂನಲ್ಲಿ ತೆರೆಯಲಾಗಿದೆ. ಸರ್ಕಾರ ಸರ್ವರ ಜ್ಞಾನವೃದ್ಧಿಯ ಯೋಜನೆ ಕಲ್ಪಿಸಿದೆ ಎಂದರು.
ಗ್ರಾಪಂ ಅಧ್ಯಕ್ಷ ಶ್ರೀನಿವಾಸ, ಉಪಾಧ್ಯಕ್ಷ ವೇದಾವತಿ, ಸದಸ್ಯರಾದ ದಿವಾಕರ, ರಾಜು, ಲೀಲಾವತಿ, ಪಾರ್ವತಮ್ಮ, ಶಶಿಕಲಾ, ಪಿಡಿಒ ಭರತ, ಕಾರ್ಯದರ್ಶಿ ಶೃತಿ, ಮುಖಂಡರಾದ ಚಂದ್ರಮೌಳಿ, ಚಿದಂಬರ, ಚಿಂತು ಇತರರಿದ್ದರು.