

ರಿಪ್ಪನ್‌ಪೇಟೆ: ಯುವ ಸಮುದಾಯ ದೇಶದ ಆಸ್ತಿ. ಯುವಶಕ್ತಿಯ ಸಕಾರಾತ್ಮಕ ಬಳಕೆಯಿಂದ ದೇಶ ಸದೃಢವಾಗಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಮೀಪದ ಚಂದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಶಿಬಿರ ಉದ್ಘಾಟಿಸಿ ಮಾತನಾಡಿ, ಸರ್ಕಾರ ಶಿಕ್ಷಣಕ್ಕಾಗಿ ಮಹತ್ತರ ಯೋಜನೆ ಅನುಷ್ಠಾನಗೊಳಿಸಿದ್ದು, ಉದ್ಯೋಗ ಸೃಷ್ಟಿ, ಔದ್ಯೋಗಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ, ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಶಿಬಿರಗಳ ಮೂಲಕ ಗ್ರಾಮೀಣ ಭಾಗದ ಜನತೆಗೆ ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಗ್ರಾಮೀಣ ಭಾಗದ ಸಮಸ್ಯೆಗೆ ಪರಿಹಾರ, ಹಳ್ಳಿಯ ಜಾನಪದ ಸಂಸ್ಕೃತಿ ಪ್ರೋತ್ಸಾಹಿಸಲು ಶಿಬಿರಗಳು ಪೂರಕ ಎಂದರು.
ಡಾ. ಎಚ್.ಎಸ್.ವಿರೂಪಾಕ್ಷಪ್ಪ, ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್, ಸದಸ್ಯ ಕೃಷ್ಣೋಜಿ ರಾವ್, ಬಿಇಒ ಕೃಷ್ಣಮೂರ್ತಿ, ಸಿಡಿಸಿ ಉಪಾಧ್ಯಕ್ಷ ಹಾಲಸ್ವಾಮಿ ಗೌಡ, ಶಿಬಿರದ ಅಧಿಕಾರಿ ಡಾ. ಕುಮಾರ್, ಅಂಜನ್‌ಕುಮಾರ್, ಶಿಕ್ಷಕ ಜಗದೀಶ್ ಇತರರಿದ್ದರು.