ಶಿಕಾರಿಪುರ: ಬೇಸಿಗೆ ಆರಂಭವಾಗುತ್ತಿದ್ದು, ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಜಾನುವಾರುಗಳು ಮತ್ತು ಬೇಸಿಗೆ ಬೆಳೆ ಬೆಳೆಯುವ ಅಚ್ಚುಕಟ್ಟದಾರ ರೈತರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮುಂಗಾರು ಮತ್ತು ಹಿಂಗಾರು ಮಳೆಗಳ ಆರ್ಭಟದಿಂದ ಸರಿಯಾಗಿ ಬೆಳೆ ಬಾರದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಯಾವುದೇ ಕೆಲಸ ಇರಲಿ, ರೈತರನ್ನು ಕಚೇರಿಗೆ ಅಲೆದಾಡಿಸಬೇಡಿ ಎಂದು ಸೂಚಿಸಿದರು.
ಸಾವಿರಾರು ಕೋಟಿ ರೂ. ವೆಚ್ಚದ ಕೆರೆ ತುಂಬಿಸುವ ಯೋಜನೆಯನ್ನು ಸಕಾಲದಲ್ಲಿ ಅನುಷ್ಠಾನಗೊಳಿಸಿ ರೈತರಿಗೆ ಅನುಕೂಲ ಒದಗಿಸಬೇಕು. ಮಳೆ ಚೆನ್ನಾಗಿ ಆಗಿರುವುದರಿಂದ ಸಾಕಷ್ಟು ಕೆರೆಗಳಲ್ಲಿ ನೀರಿದ್ದು, ನೀರಿನ ಅಗತ್ಯ ಇರುವ ಕೆರೆಗಳಿಗೆ ನೀರು ತುಂಬಿಸಬೇಕು. ಇದರಿಂದ ರೈತರ ಬೋರ್‌ವೆಲ್‌ಗಳು ರೀಚಾರ್ಜ್ ಆಗಿ ರೈತರಿಗೆ ಅನುಕೂಲವಾಗುತ್ತದೆ.
ಮಧು ಬಂಗಾರಪ್ಪ
ಜಿಲ್ಲಾ ಉಸ್ತುವಾರಿ ಸಚಿವ
ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಸಚಿವರ ಪ್ರಶ್ನೆಗೆ ನೀರಾವರಿ ಇಲಾಖೆಯ ಎಡಬ್ಲುೃಇ ಮಂಜುನಾಥ್ ಪ್ರತಿಕ್ರಿಯಿಸಿ, ಅಂಬ್ಲಿಗೊಳ ಜಲಾಶಯದ ನೀರನ್ನು ಕುಡಿಯುವ ನೀರಿಗೆ ಪ್ರತಿವರ್ಷದಂತೆ ಸ್ಟೋರೇಜ್ ಮಾಡಿ ಉಳಿದಂತೆ ಸಾಗರ ತಾಲೂಕಿನ 129 ಹಳ್ಳಿಗಳಿಗೆ ನೀರು ಪೂರೈಕೆಗೆ ಬಳಸಲಾಗುವುದು. ಅಂಜನಾಪುರ ಜಲಾಶಯದಿಂದ ಶಿಕಾರಿಪುರ ಪಟ್ಟಣ ಹಾಗೂ ಶಿರಾಳಕೊಪ್ಪಕ್ಕೆ ಕುಡಿಯುವ ನೀರು ಜೂನ್ ಜುಲೈ ತಿಂಗಳವರೆಗೆ ಸಾಕಾಗುವಷ್ಟು ನೀರು ಸಂಗ್ರಹಿಸಿ ಬೇಸಿಗೆಯಲ್ಲಿ ಉಳಿದ ನೀರನ್ನು ಅಚ್ಚುಕಟ್ಟಿನಲ್ಲಿ ಬರುವ ಕೆರೆಗಳನ್ನು ತುಂಬಿಸಲಾಗುವುದು. ಫೆಬ್ರವರಿ, ಮಾರ್ಚ್, ಏಪ್ರಿಲ್‌ನಲ್ಲಿ ಒಂದೊಂದು ಬಾರಿ ಅಂದರೆ ಮೂರು ಬಾರಿ ನೀರು ಕೊಡಲಾಗುವುದು ಎಂದರು.
ಶೇ. 100 ಫಲಿತಾಂಶ ಬರಲಿ: ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಮೊದಲ ಸ್ಥಾನ ಗಳಿಸಿ ಸರ್ಕಾರಿ ಶಾಲೆಗಳ ಹಿರಿಮೆ ಹೆಚ್ಚಿಸುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಿಕಾರಿಪುರ ತಾಲೂಕಿನಲ್ಲಿ ಶೇ. 100 ಫಲಿತಾಂಶ ಬರಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ತಾಲೂಕಿನಲ್ಲಿ ಪ್ರೌಢಶಾಲೆ ಶಿಕ್ಷಕರು, ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನಿಸಿದರು. ಬಿಇಒ ಲೋಕೇಶಪ್ಪ ಪ್ರತಿಕ್ರಿಯಿಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ತ್ಯುತ್ತಮ ಫಲಿತಾಂಶ ದಾಖಲಿಸಲು ಶಿಕ್ಷಕರು ಪ್ರಯತ್ನಿಸುತ್ತಿದ್ದಾರೆ. ಎಲ್ಲ ಶಾಲೆಗಳಲ್ಲಿ ಪಾಲಕರಿಗೆ ಮೀಟಿಂಗ್ ನಡೆಸಲಾಗಿದೆ. 11 ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದೆ. ಪ್ರತಿ ಕೇಂದ್ರಕ್ಕೆ ಸಿಸಿ ಟಿವಿ ಮತ್ತು ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಪರೀಕ್ಷೆಗೆ ಪೂರಕವಾಗಿ ಮಕ್ಕಳಿಗೆ ಹೆಚ್ಚಿನ ರೀತಿ ಕಲಿಕಾ ಶಿಬಿರಗಳು ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಗತಿಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಮಾತನಾಡಿ, ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಿದ್ದು, ಜಾನುವಾರು ಮೇವು ಮತ್ತು ಕುಡಿಯುವ ನೀರಿಗೂ ಆದ್ಯತೆ ನೀಡಲಾಗಿದೆ ಎಂದರು. ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಎಸ್.ಪಿ.ನಾಗರಾಜ ಗೌಡ, ಉಪವಿಭಾಗಾಧಿಕಾರಿ ಆರ್.ಯತೀಶ್, ಡಿಎಚ್‌ಒ ಕೆ.ಎಸ್.ನಟರಾಜ್, ಕೃಷಿ ಸಹಾಯಕ ನಿರ್ದೇಶಕ ಕಿರಣ್ ಕುಮಾರ್ ಹರ್ತಿ, ಇಒ ನಾಗರಾಜ್, ಡಿವೈಎಸ್‌ಪಿ ಕೇಶವ್, ಜಿಲ್ಲಾ ಕೆಡಿಪಿ ಸದಸ್ಯ ಉಮೇಶ್ ಮಾರವಳ್ಳಿ, ವಿವಿದ ಇಲಾಖೆ ಅಧಿಕಾರಿಗಳು ಇದ್ದರು.