

ಶಿಕಾರಿಪುರ: ಶ್ರದ್ಧೆ, ಆಸಕ್ತಿಯಿಂದ ಪರಿಶ್ರಮಪಟ್ಟರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಕುಮದ್ವತಿ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್ ಹೇಳಿದರು.
ಕುಮದ್ವತಿ ವಸತಿ ಶಾಲೆ ಸಭಾಂಗಣದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸರಸ್ವತಿ ಪೂಜೆ ಹಾಗೂ ವಾರ್ಷಿಕ ಪರೀಕ್ಷೆಗೆ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಕಲಿಕೆ ಎನ್ನುವುದು ತಪಸ್ಸು. ಅಭ್ಯಾಸ ಮತ್ತು ಸಂಕಲ್ಪದಿಂದ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ತಿಳಿಸಿದರು.
ಅಬ್ದುಲ್ ಕಲಾಂ ಅವರ ಬದುಕು ಎಲ್ಲರಿಗೂ ಸ್ಫೂರ್ತಿ. ದೊಡ್ಡ ಕನಸುಗಳನ್ನು ಕಾಣಬೇಕು. ಕನಸುಗಳನ್ನು ಸಾಕಾರಗೊಳಿಸಲು ನಿರಂತರ ಪರಿಶ್ರಮ ವಹಿಸಬೇಕು. ಪಾಲಕರ ನಿರೀಕ್ಷೆಗಳನ್ನು ಈಡೇರಿಸಬೇಕು. ನಿಮ್ಮಲ್ಲಿರುವ ಅಪಾರ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ವೀರೇಂದ್ರ ಮಾತನಾಡಿ, ಸಕಾರಾತ್ಮಕ ಆಲೋಚನೆಗಳಿಂದ ಬದುಕು ಉತ್ತಮಪಡಿಸಿಕೊಳ್ಳಲು ಮುಂದಾಗಬೇಕು. ಯಶಸ್ಸಿಗೆ ಅವಶ್ಯವಿರುವ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಕುಮದ್ವತಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ರವೀಂದ್ರ, ವಿಜ್ಞಾನ ವಿಭಾಗದ ಮುಖ್ಯಸ್ಥ ಪರ್ವೇಜ್ ಅಹಮ್ಮದ್, ಆಡಳಿತ ಸಮನ್ವಯಾಧಿಕಾರಿ ಕೆ.ಕುಬೇರಪ್ಪ, ಚಂದ್ರಶೇಖರ್, ಉಪನ್ಯಾಸಕರು ಉಪಸ್ಥಿತರಿದ್ದರು.