ಸಾಗರ: ಸಂಸ್ಕಾರದ ಮೂಲ ಆಗಿರುವ ಭಾರತೀಯ ಕಲೆಗಳು ಸಂಸ್ಕೃತಿ ಪರಂಪರೆಯನ್ನೂ ಬಿಂಬಿಸುತ್ತವೆ. ಭಾರತೀಯ ಕಲೆಗಳನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಪ್ರತಿಯೊಬ್ಬ ಪಾಲಕರ ಮೇಲಿದೆ ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಹೇಳಿದರು.

ನಗರದ ಗಾಂಧಿಮೈದಾನದ ಸಭಾಂಗಣದಲ್ಲಿ ಪರಿಣಿತಿ ಕಲಾಕೇಂದ್ರ ಏರ್ಪಡಿಸಿದ್ದ ಭರತನಾಟ್ಯ ಮತ್ತು ಜಾನಪದ ನೃತ್ಯಗಳ ವಿಶೇಷ ಕಾರ್ಯಕ್ರಮ ವರ್ಷೋತ್ಸವ ಉದ್ಘಾಟಿಸಿ ಮಾತನಾಡಿ, ಮಕ್ಕಳು ಪರಿಶ್ರಮದಿಂದ ಅಭ್ಯಾಸ ಮಾಡಿದಲ್ಲಿ ಯಶಸ್ಸು ಸಾಧಿಸಬಹುದು. ಜೀವನದಲ್ಲಿ ಸಂಸ್ಕಾರ, ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್ ಮಾತನಾಡಿ, ಹೊರರಾಜ್ಯದಿಂದ ಪ್ರತಿಭಾನ್ವಿತರನ್ನು ಕರೆಯಿಸಿ ಪ್ರದರ್ಶನ ಏರ್ಪಡಿಸುವ ಜತೆಗೆ ಸ್ಥಳೀಯ ಪ್ರತಿಭೆಗಳಿಗೆ ಕಲಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಪರಿಣಿತಿ ಕಲಾಕೇಂದ್ರ ಸಾಗರದ ಹೆಗ್ಗಳಿಕೆ ಎಂದರು.
ಪರಿಣಿತಿ ಕಲಾಕೇಂದ್ರದ ಗೌರವಾಧ್ಯಕ್ಷೆ ವೀಣಾ ಬೆಳೆಯೂರು, ರಾಷ್ಟ್ರೀಯ ನೃತ್ಯ ಸಂಗೀತೋತ್ಸವ ಸಮಿತಿ ಅಧ್ಯಕ್ಷ ಅರುಣ್‌ಕುಮಾರ್, ನಗರಸಭೆ ಸದಸ್ಯ ಕೆ.ಆರ್.ಗಣೇಶ್‌ಪ್ರಸಾದ್, ಪರಿಣಿತಿ ಕೇಂದ್ರದ ಅಧ್ಯಕ್ಷ ಸೋಮಶೇಖರ್, ಪತ್ರಕರ್ತ ರಮೇಶ್ ಹೆಗಡೆ ಗುಂಡೂಮನೆ, ನಾಟ್ಯಗುರು ವಿದ್ವಾನ್ ಎಂ.ಗೋಪಾಲ್, ಶ್ವೇತಾ ಗೋಪಾಲ್, ಜಾನಪದ ಕಲಾವಿದ ರವೀಶ್ ಹಾರೂಡಿಕೆ, ಪ್ರೊ. ಪ್ರಭಾಕರ್, ಉದಯಕುಮಾರ್ ಕುಂಸಿ, ಎಸ್.ಆರ್.ರಕ್ಷಿತ್ ಇತರರಿದ್ದರು. ಸಂಸ್ಥೆ ವಿದ್ಯಾರ್ಥಿಗಳಿಂದ ಭರತನಾಟ್ಯ ಮತ್ತು ಜಾನಪದ ನೃತ್ಯ ಪ್ರದರ್ಶನ ನಡೆಯಿತು.