

ಸಾಗರ: ಪ್ರತಿಯೊಬ್ಬರೂ ಬದುಕನ್ನು ಪರಿಸರ ಸ್ನೇಹಿಯಾಗಿ ರೂಪಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಹೇಳಿದರು.
ನಗರದ ಎಲ್‌ಬಿ ಮತ್ತು ಎಸ್‌ಬಿಎಸ್ ಕಾಲೇಜು, ಡಾ. ಜಿ.ಎ.ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ಐತಿಹಾಸಿಕ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ಅಭಿಯಾನದಲ್ಲಿ ಐತಿಹಾಸಿಕ ವಸ್ತು ಸಂಗ್ರಹಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಪರ್ಯಾಯ ವಸ್ತುಗಳ ಬಳಕೆಯಿಂದ ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆ ಮಾಡಬೇಕು. ಪಾಕಶಾಲೆಯಲ್ಲಿ ಕಸ ಹೇಗೆ ಕಡಿಮೆ ಮಾಡಬಹುದು ಎಂದು ಯೋಚಿಸಬೇಕು. ಪೆಟ್ರೋಲಿಯಂ ಇಂಧನಕ್ಕೆ ಪರ್ಯಾಯ ಇಂಧನ ಬಳಸಬೇಕು. ಪ್ಲಾಸ್ಟಿಕ್ ಬದಲಿಗೆ ಸ್ಟೀಲ್ ಲೋಟ, ಪ್ಲೇಟ್ ಬಳಸಬೇಕು. ತೇಜಸ್ವಿನಿ ಅನಂತಕುಮಾರ್ ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ, ಬೆಂಗಳೂರು
ರಾಮ ಜನ್ಮಭೂಮಿ ಅಯೋಧ್ಯೆ, ದ್ವಾರಕಾ ಮತ್ತಿತರ ಐತಿಹಾಸಿಕ ಸಂಗತಿಗಳು ನಡೆದಿರುವುದು ಖಾತ್ರಿಯಾಗಿದೆ. ಐತಿಹಾಸಿಕ ಸ್ಮಾರಕಗಳು ನಮ್ಮ ಸಂಪತ್ತು. ಅವುಗಳನ್ನು ಸಂರಕ್ಷಿಸಬೇಕು. ಪರಿಸರ ಉಳಿಸಿಕೊಳ್ಳುವ ಜತೆಗೆ ಅಭಿವೃದ್ಧಿ ಮಾದರಿಗಳನ್ನು ಸಾಧಿಸಬೇಕು. ಇದಕ್ಕೆ ಭುವನೇಶ್ವರದ ದೇವಸ್ಥಾನ ಉದಾಹರಣೆ ಎಂದು ತಿಳಿಸಿದರು.
ದೇಶದ ಆರು ರಾಜ್ಯಗಳಲ್ಲಿ ಪಶ್ಚಿಮಘಟ್ಟಗಳು ವ್ಯಾಪಿಸಿಕೊಂಡಿವೆ. ಶೇ.70ರಷ್ಟು ಕರ್ನಾಟಕದಲ್ಲಿದೆ. ಅಪಾರ ಪ್ರಮಾಣದಲ್ಲಿ ಜೀವ ವೈವಿಧ್ಯವಿದೆ. ಆದರೆ ಪಶ್ಚಿಮಘಟ್ಟಗಳ ಪರಿಸ್ಥಿತಿ ಅಯೋಮಯವಾಗಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅವೈಜ್ಞಾನಿಕ. ವಿದ್ಯಾರ್ಥಿ ಸಮೂಹ ಈ ಬಗ್ಗೆ ಜಾಗೃತರಾಗಬೇಕು. ಪ್ರೊ. ಬಿ.ಎಂ.ಕುಮಾರಸ್ವಾಮಿ ಪರಿಸರ ಚಿಂತಕ
ಜೀವ ವೈವಿಧ್ಯ ಮಾಹಿತಿ ಪ್ರಶ್ನಾವಳಿಯ ಕಿರು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ತೇಜಸ್ವಿನಿ ಅನಂತಕುಮಾರ್, ಪ್ರೊ. ಬಿ.ಎಂ.ಕುಮಾರಸ್ವಾಮಿ, ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಶ್ರೀಲಕ್ಷ್ಮೀ, ಕಾಲೇಜಿನ ಹಿರಿಯ ವಿದ್ಯಾರ್ಥಿ ಮಂಜುನಾಥ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಪ್ರಸ್ತುತ ಅಭಿವೃದ್ಧಿಗೂ ಪರಿಸರಕ್ಕೂ ಸಂಬಂಧವೇ ಇಲ್ಲದಂತಾಗಿದೆ. ನಾಶ ಮಾಡಿದವರಿಗೆ ಅದನ್ನು ಬೆಳೆಸುವ ಮನಸ್ಥಿತಿ ಇಲ್ಲ. ಮಲೆನಾಡಿನಲ್ಲಿ ವ್ಯಾಪಕವಾಗಿ ಕಾಡು ನಾಶವಾಗಿದೆ. ಜಗತ್ತಿನಲ್ಲೇ ಪಶ್ವಿಮಘಟ್ಟ ಶ್ರೇಷ್ಠ ಜೀವವೈವಿಧ್ಯ ತಾಣ ಎಂದು ಹೆಸರಾಗಿದೆ. ಪರಿಸರ ಉಳಿಸಿಕೊಳ್ಳುವುದು ಭವಿಷ್ಯದ ಬದುಕಿಗೆ ಅಗತ್ಯ. ಬಿ.ಆರ್.ಜಯಂತ್ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ
ಕಾಲೇಜು ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಡಾ. ಎಚ್.ಎಂ.ಶಿವಕುಮಾರ್, ಖಜಾಂಚಿ ಕೆ.ವೆಂಕಟೇಶ್ ಕವಲಕೋಡು, ಡಾ. ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಶಿಲ್ಪಾ, ಎಲ್‌ಬಿ ಕಾಲೇಜಿನ ಪ್ರಾಚಾರ್ಯೆ ಡಾ. ಲಕ್ಷ್ಮೀ, ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ವಿನಾಯಕ್ ಇತರರಿದ್ದರು.