ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ

13 skp 1
ಶಿಕಾರಿಪುರ ತಾಲೂಕಿನ ಬೇಗೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನು ಗೌರವಿಸಲಾಯಿತು. ಎಸ್.ಪಿ.ನಾಗರಾಜ ಗೌಡ, ನಗರದ ಮಹದೇವಪ್ಪ, ಶೋಭಾ ಉಮೇಶ್, ಈರನಗೌಡ, ರುದ್ರಗೌಡ, ಸುಧೀರ್ ಮಾರವಳ್ಳಿ ಇತರರಿದ್ದರು.
Published on

ಶಿಕಾರಿಪುರ: ಶ್ರದ್ಧೆ ಹಾಗೂ ಪರಿಶ್ರಮದಿಂದ ಅಧ್ಯಯನ ನಡೆಸಿದರೆ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ತಾಲೂಕಿನ ಬೇಗೂರು ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲೆ ಎಂದರೆ ಭವಿಷ್ಯದ ಭಾರತ ನಿರ್ಮಾಣ ಮಾಡುವ ಮಂದಿರ. ಶಾಲೆಯು ಶತಮಾನೋತ್ಸವ ಆಚರಿಸುತ್ತಿರುವುದು ಪ್ರೇರಣಾದಾಯಕ ಸಂಗತಿ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸಿದ ದೇಗುಲ. ಗ್ರಾಮಾಂತರ ಪ್ರದೇಶದ ಮಕ್ಕಳು ಸುಶಿಕ್ಷಿತರಾಗಲು ಶಾಲೆಗಳ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸುಶಿಕ್ಷಿತ, ಸ್ವಾಭಿಮಾನಿ ಮತ್ತು ಗೌರವ ಬದುಕು ಕಟ್ಟಿಕೊಳ್ಳಬೇಕು. ಮಕ್ಕಳ ಸರ್ವತೋಮುಖ ಅಭಿವೃದ್ಧಿ ಕಡೆಗೆ ಪಾಲಕರು, ಶಿಕ್ಷಕರು ಗಮನ ವಹಿಸಬೇಕು. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಸರಿಯಾದ ಶಿಕ್ಷಣ ನೀಡಿದರೆ ಮಕ್ಕಳು ಸಮಾಜಕ್ಕೆ ಕೊಡುಗೆಯಾಗುತ್ತಾರೆ ಎಂದರು.

ಶತಮಾನ ಕಂಡ ಶಾಲೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನದ ಯೋಜನೆ ಬರಲಿದೆ. ಆಗ ತಾಲೂಕಿನ ಎಲ್ಲ ಶತಮಾನ ಕಂಡ ಶಾಲೆಗಳನ್ನು ಮಾದರಿಯಾಗಿ ಎಲ್ಲರೂ ಒಟ್ಟಾಗಿ ಅಭಿವೃದ್ಧಿ ಮಾಡೋಣ. ಫಲಿತಾಂಶಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಶಾಲೆ ಅಭಿವೃದ್ಧಿಗೆ ಬಿಎಸ್‌ವೈ ಅನುದಾನ ನೀಡಿದ್ದರು. ಬೇಗೂರಿನ ಶತಮಾನ ಕಂಡ ಶಾಲೆ ನಮ್ಮ ಹೆಮ್ಮೆ. ಬಿ.ವೈ.ರಾಘವೇಂದ್ರ ಲೋಕಸಭಾ ಸದಸ್ಯ

ಶಿಕ್ಷಣದಲ್ಲಿ ರಾಷ್ಟ್ರೀಯ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಾಮಾಜಿಕ ಚಿಂತನೆಗಳ ಕಡೆಗೆ ಮಕ್ಕಳು ಗಮನಹರಿಸಬೇಕು. ಕೌಶಲಾಧಾರಿತ ಶಿಕ್ಷಣ ಮಕ್ಕಳ ಬದುಕನ್ನು ಹಸನು ಮಾಡುತ್ತದೆ. ಮಾನವೀಯ ಮೌಲ್ಯಗಳ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ಕೊಡಬೇಕು ಎಂದು ತಿಳಿಸಿದರು.

ರೈಲ್ವೆ ಯೋಜನೆ ಕಾರ್ಯ ತ್ವರಿತಗತವಾಗಿ ನಡೆಯುತ್ತಿದೆ. ಜಮೀನು ನೀಡಿದವರಿಗೆ ಪರಿಹಾರ ಬರುತ್ತಿದೆ. ರೈಲ್ವೆ ಯೋಜನೆಯಾದರೆ ತಾಲೂಕಿನಿಂದ ದೊಡ್ಡ ನಗರಗಳಿಗೆ ಸಂಪರ್ಕ ದೊರೆಯುತ್ತದೆ ಎಂದರು. ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಹಿರಿಯರು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಸ್.ಪಿ.ನಾಗರಾಜ ಗೌಡ, ಭದ್ರಾ ಕಾಡಾ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ, ಬೇಗೂರು ಗ್ರಾಪಂ ಅಧ್ಯಕ್ಷೆ ಶೋಭಾ ಉಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಈರನಗೌಡ, ಶತಮಾನೋತ್ಸವ ಸಮಿತಿ ಅಧ್ಯಕ್ಷ ರುದ್ರಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್ ಮಾರವಳ್ಳಿ, ಉದ್ಯಮಿ ಎನ್.ವಿ.ಈರೇಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಧುಕೇಶ್ವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಪ್ರಕಾಶ್, ಗೌರವಾಧ್ಯಕ್ಷ ಬಿ.ಆರ್.ಮಂಜಪ್ಪ, ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಪ್ರಸನ್ನ, ಮಂಜಣ್ಣ, ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net