ಶಿಕಾರಿಪುರ: ಪ್ರಕೃತಿಯಲ್ಲಿ ಬದಲಾವಣೆ ಆರಂಭವಾಗುವ ಸಂಕ್ರಾಂತಿಯು ವಿಶೇಷ ಹಬ್ಬ ಎಂದು ಬೇಗೂರಿನ ಸಂಪನ್ಮೂಲ ವ್ಯಕ್ತಿ ಎಚ್.ಪಿ.ಪರಮೇಶ್ವರಪ್ಪ ಹೇಳಿದರು.
ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ, ಸಂಕ್ರಾಂತಿ ಸುಗ್ಗಿ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿ, ಸುಗ್ಗಿ ನಂತರ ಹಬ್ಬ ಬರುವುದರಿಂದ ರೈತರಲ್ಲಿ ಸಂಭ್ರಮ ಸಡಗರ ಹೆಚ್ಚಿಸುತ್ತದೆ. ಸಂಕ್ರಾಂತಿ ನಂತರ ಹಗಲಿನ ಕಾಲಾವಧಿ ಹೆಚ್ಚುತ್ತದೆ. ಕೊರೆವ ಚಳಿಯಲ್ಲಿ ಜಡವಾಗಿದ್ದ ಮರಗಿಡಗಳಲ್ಲಿ ಎಲೆ ಉದುರಿ ಹೊಸ ಚಿಗುರು ಬರಲಾರಂಭಿಸುತ್ತದೆ ಎಂದು ತಿಳಿಸಿದರು.
ಮೈತ್ರಿ ಶಾಲೆಯು ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ನೀಡುತ್ತಿದೆ. ನಮ್ಮ ದೇಶದ ಮತ್ತು ನಾಡಿನ ಸೊಬಗು, ಆಚಾರ ವಿಚಾರಗಳನ್ನು ಅಚ್ಚುಕಟ್ಟಾಗಿ ಉಳಿಸಿಕೊಂಡು ಬರುತ್ತಿದೆ. ಶಾಲೆ ಶಿಕ್ಷಕನಾಗಿ ಸೇವೆ ಸಲ್ಲಿಸಿದ ನೆನಪುಗಳು ಶಾಶ್ವತವಾಗಿ ಉಳಿದಿವೆ ಎಂದರು.
ಸಿದ್ದಲಿಂಗೇಶ್ವರ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಜಬೀವುಲ್ಲಾ ಮಾತನಾಡಿ, ಹಬ್ಬಗಳು ನಮ್ಮ ಸಂಸ್ಕೃತಿ ಪ್ರತೀಕವಾಗಿವೆ. ಹಬ್ಬಗಳು ಸದ್ವಿಚಾರಗಳನ್ನು ಹೆಚ್ಚಿಸುತ್ತವೆ. ಎಲ್ಲರೊಂದಿಗೆ ಬೆರೆತು ಬಾಳುವ ಕಲ್ಪನೆಯನ್ನು ಮೂಡಿಸುತ್ತದೆ ಎಂದು ತಿಳಿಸಿದರು. ಪ್ರಾಚಾರ್ಯ ವಿಶ್ವನಾಥ್ ಮಾತನಾಡಿ, ಪಠ್ಯದ ಜತೆಗೆ ಮಣ್ಣಿನ ಸಂಸ್ಕೃತಿ, ಸಂಸ್ಕಾರ ಪರಂಪರೆ, ಆಚಾರಗಳನ್ನು ಅರಿತುಕೊಳ್ಳಬೇಕು. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು ಎಂದರು.
ವಿದ್ಯಾರ್ಥಿಗಳಿಂದ ಸುಗ್ಗಿ ಹಬ್ಬದ ನೃತ್ಯಗಳು, ವಿವೇಕಾನಂದರ ಸಂದೇಶಗಳ ಭಾಷಣ ನಡೆಯಿತು. ವಿವಿಧ ಅಂಗಸಂಸ್ಥೆಗಳ ಪ್ರಾಚಾರ್ಯ ಎಂ.ವಿರೇಂದ್ರ, ಸಿದ್ದೇಶ್ವರ ಮೈತ್ರಿ ಮಾತೃ ಮಂಡಳಿ ಸದಸ್ಯೆ ಅಪರ್ಣಾ ಗುರುಮೂರ್ತಿ, ಪ್ರಭಾರಿ ಮುಖ್ಯಶಿಕ್ಷಕ ಪ್ರಶಾಂತ ಕುಬಸದ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಮಾತೃ ಮಂಡಳಿ ಮಾತೆಯರು ಉಪಸ್ಥಿತರಿದ್ದರು.