ಸಾಗರ: ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಮಾ.31ರಿಂದ ಏ.12ರವರೆಗೆ ವೈವಿಧ್ಯ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಂಗಾರಮಕ್ಕಿ ಕ್ಷೇತ್ರದ ಧರ್ಮದರ್ಶಿ ಶ್ರೀ ಮಾರುತಿ ಗುರೂಜಿ ಹೇಳಿದರು.
ಸಾಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಉತ್ಸವದ ಜನಸಂಪರ್ಕ ಅಭಿಯಾನ ಉದ್ಘಾಟಿಸಿ ಮಾತನಾಡಿ, ಎರಡು ವಾರಗಳ ಕಾಲ ಕ್ಷೇತ್ರದಲ್ಲಿ ಶ್ರೀ ದೇವರ ಮರುಪ್ರತಿಷ್ಠಾಪನೆ, ನೂತನ ಗೋಪುರ ಸ್ವರ್ಣ ಕಲಶ ಸ್ಥಾಪನೆ ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಕಲ್ಪಿಸಿ ಸಂಪರ್ಕ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಮಾ.31ಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಏ.3ಕ್ಕೆ ಶ್ರೀ ದೇವರ ಪ್ರತಿಷ್ಠಾಪನೆ ನೆರವೇರಲಿದೆ. ಏ.4 ಮತ್ತು 5ಕ್ಕೆ ಪ್ರತಿಷ್ಠಾಪನಾ ರಥೋತ್ಸವ, ಏ.6ಕ್ಕೆ ರಾಮನವಮಿ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಶರಾವತಿ ನದಿ ಪಕ್ಕದಲ್ಲಿ ನಿರ್ಮಿಸಿರುವ ವನವಾಸಿ ಸೀತಾರಾಮಚಂದ್ರ ದೇವಸ್ಥಾನದಲ್ಲಿ ವರ್ಧಂತಿ ಉತ್ಸವ ನಡೆಯಲಿದೆ. ಮೂರು ದಿನಗಳ ಕಾಲ ಶರಾವತಿ ನದಿಯಲ್ಲಿ ಕುಂಭಸ್ನಾನಕ್ಕೆ ಅವಕಾಶ ಕಲ್ಪಿಸಿದೆ. ಅನೇಕ ಸಾಧುಸಂತರು ಕುಂಭಸ್ನಾನದಲ್ಲಿ ಪಾಲ್ಗೊಳ್ಳುವರು ಎಂದರು.
ಏ.7ರಂದು ಸಂಜೆ 6.15ಕ್ಕೆ ಶರಾವತಿ ನದಿಗೆ ಶರಾವತಿ ಆರತಿ ಎಂಬ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏ.11ರಂದು ಪುಷ್ಪ ರಥೋತ್ಸವ, ಏ.12ಕ್ಕೆ ಬ್ರಹ್ಮ ರಥೋತ್ಸವ, ಏ.13ರಂದು ಓಕಳಿಯೊಂದಿಗೆ ಧಾರ್ಮಿಕ ಕಾರ್ಯಕ್ರಮ ಸಮಾಪ್ತಿ ಆಗಲಿದೆ ಎಂದು ತಿಳಿಸಿದರು.
ಸಾಗರ ವಿಧಾನಸಭಾ ಕ್ಷೇತ್ರದ ಪರವಾಗಿ ಶ್ರೀಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಗೌರವ ಸಲ್ಲಿಸಿದರು. ದೈವಜ್ಞ ಬ್ರಾಹ್ಮಣ ಸಮಾಜದ ಹನುಮಂತ ವಿ.ಶೇಟ್, ಯು.ಜಿ.ಶ್ರೀಧರ್, ಜಗದೀಶ್ ಕುರ್ಡೇಕರ್, ಅರುಣಕುಮಾರ್, ನಾರಾಯಣ ಶೇಟ್, ಅಶೋಕ್, ನಗರಸಭೆ ಸದಸ್ಯರಾದ ಗಣೇಶಪ್ರಸಾದ್, ಮಧುರಾ ಶಿವಾನಂದ್, ಪ್ರೇಮ ಸಿಂಗ್, ಸವಿತಾ ವಾಸು, ಬಿ.ಎಚ್.ಲಿಂಗರಾಜ್, ಪ್ರಮುಖರಾದ ಐ.ವಿ.ಹೆಗಡೆ, ಸುಧೀಂದ್ರ ಇತರರಿದ್ದರು.