ಡೆಂಘೆ, ಕರೊನಾ ತಡೆಗೆ ಮುಂಜಾಗ್ರತೆಯೇ ಮದ್ದು

28sgr1
ಸಾಗರದ ಉಪವಿಭಾಗೀಯ ಆಸ್ಪತ್ರೆ ಸಭಾಂಗಣದಲ್ಲಿ ಮೇಲ್ದರ್ಜೆಗೇರಿಸುವ ನೀಲಿನಕ್ಷೆ ವೀಕ್ಷಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಪೂರ್ವಭಾವಿ ಸಭೆ ನಡೆಸಿದರು. ಮೈತ್ರಿ ಪಾಟೀಲ್, ಸವಿತಾ ವಾಸು ಇತರರಿದ್ದರು.
Published on

ಸಾಗರ: ಕರೊನಾ ಹಾಗೂ ಡೆಂಘೆ ಬಗ್ಗೆ ಆತಂಕ ಬೇಡ. ಮುಂಜಾಗ್ರತೆಯಿಂದ ಇರಬೇಕು. ಕಾಯಿಲೆ ಬಾರದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಹಾಗೂ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರ ಉಪವಿಭಾಗೀಯ ಆಸ್ಪತ್ರೆ ಸಭಾಂಗಣದಲ್ಲಿ ಕರೊನಾ ಮತ್ತು ಡೆಂಘೆ ನಿಯಂತ್ರಣ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕರೊನಾ ಮತ್ತು ಡೆಂಘೆ ಎದುರಿಸಲು ಸಮರೋಪಾದಿಯಲ್ಲಿ ಸಜ್ಜಾಗಬೇಕು. ಕೆಎಫ್‌ಡಿ ಬಗ್ಗೆ ಸಹ ಇಲಾಖೆ ಗಮನ ಹರಿಸಬೇಕು ಎಂದು ಸೂಚಿಸಿದರು.

ಜನೌಷಧ ಕೇಂದ್ರ ಅಗತ್ಯ: ರಾಜ್ಯ ಸರ್ಕಾರ ಪ್ರತಿ ತಾಲೂಕು ಆಸ್ಪತ್ರೆಯಲ್ಲೂ ಕೀಮೋಥೆರಫಿ ಘಟಕ ಪ್ರಾರಂಭಿಸುವ ಚಿಂತನೆ ನಡೆಸಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಜನೌಷಧ ಯೋಜನೆ ಬಡವರಿಗೆ ಅಗತ್ಯ. ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧ ಕೇಂದ್ರ ಇರುವುದು ಸೂಕ್ತ. ಜನೌಷಧ ಕೇಂದ್ರದಲ್ಲಿ ಗುಣಮಟ್ಟದ ಔಷಧ ಸಿಗುವಂತೆ ಮಾಡಬೇಕು. ಈ ಬಗ್ಗೆ ಆರೋಗ್ಯ ಸಚಿವರ ಜತೆ ಚರ್ಚಿಸುತ್ತೇನೆ. ಸಾಗರದಲ್ಲಿ ವೈದ್ಯರ ಕೊರತೆ ಇಲ್ಲ. ಗ್ರಾಮೀಣ ಹಾಗೂ ನಗರ ಭಾಗದಲ್ಲಿ ವೈದ್ಯರನ್ನು ಭರ್ತಿ ಮಾಡಲಾಗಿದೆ ಎಂದರು. ಉಪವಿಭಾಗೀಯ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು 70 ಕೋಟಿ ರೂ. ಮಂಜೂರಾಗಿದ್ದು, ಕ್ಯಾಬಿನೆಟ್ ಒಪ್ಪಿಗೆ ದೊರೆತ ತಕ್ಷಣ ಹಣ ಬಿಡುಗಡೆಯಾಗುತ್ತದೆ. ಸಖಿ ಯೋಜನೆಯಡಿ 50 ಲಕ್ಷ ರೂ. ಬಿಡುಗಡೆಯಾಗಿದ್ದು, ಸದ್ಯದಲ್ಲಿ ನಗರ ವ್ಯಾಪ್ತಿಯಲ್ಲಿ ನಮ್ಮ ಕ್ಲಿನಿಕ್ ಕಾರ್ಯಾರಂಭ ಮಾಡಲಿದೆ ಎಂದರು.

ಬೆಂಗಳೂರು ಸೇರಿ ರಾಜ್ಯದ ಬೇರೆ ಕಡೆ ಕರೊನಾ ಸೋಂಕು ಹರಡುತ್ತಿದೆ. ಜ್ವರ, ಶೀತ ಕಾಣಿಸಿಕೊಂಡವರು ತಕ್ಷಣ ತಪಾಸಣೆಗೆ ಒಳಪಡಬೇಕು. ಆಸ್ಪತ್ರೆಯಲ್ಲಿ ಕರೊನಾ ಪರೀಕ್ಷೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕು. ಆರೋಗ್ಯ ಇಲಾಖೆ ಸರ್ವಸನ್ನದ್ಧವಾಗಬೇಕು. ಆ್ಯಂಬುಲೆನ್ಸ್‌ಗೆ ಮೂವರು ಚಾಲಕರಿದ್ದು, ಗುತ್ತಿಗೆ ಆಧಾರದಲ್ಲಿ ಇನ್ನೊಬ್ಬರನ್ನು ತೆಗೆದುಕೊಳ್ಳಬೇಕು ಎಂದರು.

ಮಕ್ಕಳು, ಗರ್ಭಿಣಿಯರು, ವೃದ್ಧರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ವೈದ್ಯ ಸಿಬ್ಬಂದಿ ರಜೆ ಹಾಕದೆ ಕರ್ತವ್ಯದಲ್ಲಿ ಇರಬೇಕು. 20ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣ ದಾಖಲಾದರೆ ಸಮುದಾಯ ಭವನ ಅಥವಾ ಇತರ ಕಡೆ ಪ್ರತ್ಯೇಕ ಘಟಕ ಪ್ರಾರಂಭಿಸಬೇಕು. ಗೋಪಾಲಕೃಷ್ಣ ಬೇಳೂರು ಶಾಸಕ

ನಗರ ವ್ಯಾಪ್ತಿಯಲ್ಲಿ ಡೆಂಘೆ ಹರಡದಂತೆ ಸ್ವಚ್ಛತಾ ಕೆಲಸ ಕೈಗೊಳ್ಳಬೇಕು. ಚರಂಡಿ ಸೇರಿದಂತೆ ಇತರ ಕಡೆ ಕೊಳಚೆ ನೀರು ಸಂಗ್ರಹವಾಗದಂತೆ ಮುಂಜಾಗ್ರತೆ ವಹಿಸಬೇಕು. ಆಸ್ಪತ್ರೆಯಲ್ಲಿ ಹಾವು ಕಡಿತ, ನಾಯಿ ಕಡಿತಕ್ಕೆ ನೀಡುವ ಚುಚ್ಚುಮದ್ದು ಸಂಗ್ರಹಿಸಿಕೊಳ್ಳಬೇಕು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯ ಗಣಪತಿ ಮಂಡಗಳಲೆ, ಉಪವಿಭಾಗಾಧಿಕಾರಿ ಜಗದೀಶ್, ತಹಸೀಲ್ದಾರ್ ಚಂದ್ರಶೇಖರ ನಾಯ್ಕ, ಪೌರಾಯುಕ್ತ ನಾಗಪ್ಪ, ಇಒ ಶಿವಪ್ರಸಾದ್, ಸಿವಿಲ್ ಸರ್ಜನ್ ಡಾ. ಕೆ.ಪರಪ್ಪ, ಡಾ. ನಾಗರಾಜ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net