ಇನ್ನೂ 50 ದಿನ ವಿದ್ಯುತ್ ಉತ್ಪಾದನೆ ಸಾಧ್ಯ

08kgl01
ಲಿಂಗನಮಕ್ಕಿ ಜಲಾಶಯದಲ್ಲಿ ಗುರುವಾರ ಸಂಗ್ರಹವಿದ್ದ ನೀರಿನ ಮಟ್ಟ.
Published on

ಕಾರ್ಗಲ್(ಸಾಗರ): ರಾಜ್ಯದ ಜಲವಿದ್ಯುತ್ ಉತ್ಪಾದನೆಯ ಪ್ರಮುಖ ಜಲಾಶಯ ಲಿಂಗನಮಕ್ಕಿ ಅಣೆಕಟ್ಟಿನಲ್ಲಿ ಪ್ರಸ್ತುತ ಸಂಗ್ರಹವಿರುವ 38.15 ಟಿಎಂಸಿ ನೀರಿನಿಂದ ಇನ್ನೂ 50 ದಿನಗಳವರೆಗೆ (ಜೂನ್ ತಿಂಗಳ ಕೊನೆಯವರೆಗೆ) ವಿದ್ಯುತ್ ಉತ್ಪಾದಿಸಬಹುದು.

ಕಳೆದ ಬಾರಿಗಿಂತ ಲಿಂಗನಮಕ್ಕಿ ಅಣೆಕಟ್ಟಿನಲ್ಲಿ ಈ ವರ್ಷ 20 ಅಡಿ ನೀರು ಅಧಿಕ ಸಂಗ್ರಹವಿದೆ. ಇದು ಜಲಾಶಯದ ಒಟ್ಟು ನೀರಿನ ಸಂಗ್ರಹದಲ್ಲಿ ಶೇ. 25.16ರಷ್ಟು ಮಾತ್ರ. ಕಳೆದ ವರ್ಷ ಮೇ ವೇಳೆಗೆ ಜಲಾಶಯದಲ್ಲಿ ಕೇವಲ 1,749.65 ಅಡಿ ನೀರು ಸಂಗ್ರಹವಿತ್ತು. ಸಮುದ್ರ ಮಟ್ಟದಿಂದ 1,819 ಅಡಿ ಎತ್ತರದ ಲಿಂಗನಮಕ್ಕಿ ಜಲಾಶಯದಲ್ಲಿ ಹಾಲಿ 1,768.90 ಅಡಿ ನೀರು ಸಂಗ್ರಹವಿದ್ದು, ಪ್ರತಿನಿತ್ಯ ಸಾಮಾನ್ಯವಾಗಿ ಶರಾವತಿ ಜಲವಿದ್ಯುದಾಗದಿಂದಲೇ 17ರಿಂದ 18 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದಕ್ಕಾಗಿ ಜಲಾಶಯದಿಂದ 8 ಸಾವಿರ ಕ್ಯೂಸೆಕ್ ನೀರನ್ನು ಬಳಸಲಾಗುತ್ತಿದೆ. ಇದೇ ರೀತಿ ವಿದ್ಯುತ್ ಉತ್ಪಾದನೆ ಮುಂದುವರಿದರೆ ಜೂನ್ ಅಂತ್ಯದವರೆಗೆ ವಿದ್ಯುತ್ ಉತ್ಪಾದನೆ ಹಾಗೂ ಕುಡಿಯುವ ನೀರಿಗೆ ಸಮಸ್ಯೆಯಿಲ್ಲ.

ಶರಾವತಿ ಯೋಜನಾ ಪ್ರದೇಶದ ಲಿಂಗನಮಕ್ಕಿ, ಮಹಾತ್ಮ ಗಾಂಧಿ, ಶರಾವತಿ ಹಾಗೂ ಗೇರುಸೊಪ್ಪ ಜಲವಿದ್ಯುದಾಗರಗಳಿಂದ ಒಟ್ಟು 20 ರಿಂದ 21 ಮಿಲಿಯನ್ ಯೂನಿಟ್ ವಿದ್ಯುತ್ತನ್ನು ಪ್ರತಿ ನಿತ್ಯ ಉತ್ಪಾದಿಸಲಾಗುತ್ತಿದೆ. ಪ್ರತಿ ವರ್ಷದಂತೆ ಶರಾವತಿ ಜಲ ವಿದ್ಯುದಾಗರದ ಎಲ್ಲ 10 ಯೂನಿಟ್‌ಗಳ ವಾರ್ಷಿಕ ನಿರ್ವಹಣೆ ಕಾರ್ಯ ಕೈಗೆತ್ತಿಕೊಂಡು ಪೂರ್ಣಗೊಳಿಸಿ ಸುಸ್ಥಿತಿಯಲ್ಲಿಡಲಾಗಿದೆ. ಮುಂಗಾರು ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಶರಾವತಿ ಯೋಜನಾ ಪ್ರದೇಶದ ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಅಭಿಯಂತ ಎಚ್.ಆರ್.ರಮೇಶ್ ಮಾಹಿತಿ ನೀಡಿದರು.

ಲಿಂಗನಮಕ್ಕಿ ಜಲಾಶಯದ ಹನ್ನೊಂದು ರೇಡಿಯಲ್ ಗೇಟ್‌ಗಳ ವಾರ್ಷಿಕ ನಿರ್ವಹಣೆಯನ್ನು ಮಾಡಿಕೊಂಡಿದ್ದು, ಸುರಕ್ಷತೆ ವಿಚಾರದಲ್ಲಿ ಈಗಾಗಲೇ ರಾಜ್ಯದ ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ. ಈ ಬಾರಿ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ತಜ್ಞರು ನೀಡಿರುವುದರಿಂದ ಜಲಾಶಯದಲ್ಲಿ ಉತ್ತಮ ನೀರಿನ ಸಂಗ್ರಹ ನಿರೀಕ್ಷೆ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net