

ಸಾಗರ: ಪಾರಂಪರಿಕ ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟ, ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟಿತರಾಗುವುದು ಅವಶ್ಯ ಎಂದು ರಾಜ್ಯ ಅಡಕೆ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ ಜನವರಿಯಲ್ಲಿ ಆಯೋಜಿಸಿದ್ದ ಅಡಕೆ ಬೆಳೆಗಾರರ ಸಮಾವೇಶ ಹಾಗೂ ಅಡಕೆ ಬೆಳೆಗಾರರಿಗೆ ಸಮಗ್ರ ಮಾಹಿತಿ ಒಳಗೊಂಡ ಐವತ್ತರ ಈ ಹೊತ್ತು ಸ್ಮರಣ ಸಂಚಿಕೆಯನ್ನು ಸಾಗರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಸಾವಿರಾರು ಕೋಟಿ ರೂ. ನಷ್ಟ: ಇತ್ತೀಚೆಗೆ ಅಡಕೆ ಹಾಳೆ ಮತ್ತು ದೊನ್ನೆಯಲ್ಲಿ ಆಹಾರ ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎನ್ನುವ ವರದಿಯಿಂದ ಅಡಕೆ ಬೆಳೆಗಾರರಿಗೆ ತೀವ್ರ ನಷ್ಟ ಉಂಟಾಗಿದೆ. ಮೂರುವರೆ ಸಾವಿರ ಕೋಟಿ ರೂ.ಗಳಷ್ಟು ವಹಿವಾಟು ನಡೆಸುತ್ತಿದ್ದ ಗ್ರಾಮೀಣ ಅಡಕೆ ಹಾಳೆ ಕಾರ್ಖಾನೆಗಳು ನೆಲಕಚ್ಚಿವೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಇಂದಿಗೂ ನಾವು ಅಡಕೆ ಹಾಳೆಗಳನ್ನು ಬಳಸಿ ಆಹಾರ ಸೇವಿಸುತ್ತಿದ್ದೇವೆ. ದೇಶದಲ್ಲಿ ಎಲ್ಲೂ ಇದರ ಉಪಯೋಗದಿಂದ ಕ್ಯಾನ್ಸರ್ ಬಂದ ಉದಾಹರಣೆ ಇಲ್ಲ. ಸುಮ್ಮನೇ ನಮ್ಮ ಮೇಲೆ ಪ್ರಹಾರ ಮಾಡಲಾಗುತ್ತಿದೆ. ವೈಜ್ಞಾನಿಕವಾಗಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಬೆಳೆ ಸ್ಥಿರತೆ ಕಾಪಾಡಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಎಚ್ಚರಿಕೆಯಿಂದ ಬೆಳೆಗಾರರ ಹಿತ ಕಾಪಾಡುತ್ತಿದೆ ಎಂದರು.
ಅಡಕೆ ಹಾನಿಕಾರಕವಲ್ಲ ಎನ್ನುವುದನ್ನು ಮತ್ತೆ ಮತ್ತೆ ಸಾಬೀತುಪಡಿಸುವ ಸವಾಲು ನಮ್ಮೆದುರು ಇದೆ. ಸುಪ್ರೀಂ ಕೋರ್ಟ್‌ನಲ್ಲಿ ಒಮ್ಮೆ ವಾದ ಮಾಡಲು 3 ಲಕ್ಷ ರೂ. ಶುಲ್ಕ ಭರಿಸಬೇಕು. ನಿರಂತರ ಹೋರಾಟ ನಡೆಸಲು ಮಹಾಮಂಡಲ ರಚಿಸಿದ್ದೇವೆ. ಎಲ್ಲ ಸಂಘಟನೆಗಳು ಸದಸ್ಯರಾಗಬೇಕು. ಈವರೆಗೆ 1.5 ಕೋಟಿ ರೂ.ಗಳನ್ನು ನಿಧಿಯಾಗಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಅರಣ್ಯ ಉತ್ಪನ್ನ ಪಟ್ಟಿಗೆ ಸೇರಿಸಿದ್ದ ಅಧಿಕಾರಿಗಳು: ಸಾಂಪ್ರದಾಯಿಕ ಅಡಕೆ ಬೆಳೆಗಾರರು ನಿರಂತರವಾಗಿ ಸರ್ಕಾರದ ಕಿರಿಕಿರಿಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಅಧಿಕಾರಿಗಳು ಅಡಕೆ ಬೆಳೆಯನ್ನು ಅರಣ್ಯ ಉತ್ಪನ್ನಗಳ ಪಟ್ಟಿಗೆ ಸೇರಿಸಿದ್ದರು. ಅದನ್ನು ಕ್ಯಾಂಪ್ಕೋ ಸಂಸ್ಥೆ ನಮ್ಮ ಗಮನಕ್ಕೆ ತಂದಿತ್ತು. ಕೂಡಲೇ ಎಚ್.ಎಸ್.ಮಂಜಪ್ಪ ಅವರು ಕೇಂದ್ರ ಸರ್ಕಾರದ ಜತೆ ಚರ್ಚಿಸಿ ಅದನ್ನು ಪಟ್ಟಿಯಿಂದ ಕೈಬಿಡುವಂತೆ ಹಾಗೂ ಒಂದೇ ದಿನಕ್ಕೆ ಹೊಸ ಸುತ್ತೋಲೆ ಮಾಡಿಸಿದ್ದರು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಇದು ಸಾಧ್ಯವಾಗದೆ ಹೋಗಿದ್ದರೆ ನಾವು ಬೆಳೆದ ಅಡಕೆ ಮಾರಲು ಅರಣ್ಯ ಇಲಾಖೆ ಅನುಮತಿ ತರಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು ಎಂದು ತಿಳಿಸಿದರು.
ಅಡಕೆಗೆ ಕೊಳೆರೋಗ, ಎಲೆಚುಕ್ಕೆ ಮತ್ತಿತರ ರೋಗಗಳು ಬಾಧಿಸುತ್ತಿವೆ. ಆದರೆ ಇಂದಿಗೂ ವ್ಯವಸ್ಥಿತ ಸಂಶೋಧನೆಗಳು ನಡೆದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ. ಎಲೆಚುಕ್ಕೆ ರೋಗಕ್ಕೆ ಹೆಕ್ಟೇರ್‌ಗೆ 1,600 ರೂ. ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದ್ದು ತುಂಬ ಕಡಿಮೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸುತ್ತೇನೆ ಎಂದರು.
ಗುತ್ತಿಗೆ ಆಧಾರದಲ್ಲಿ ಬೆಳೆಯಲು ಅವಕಾಶ: ಅಡಕೆ ಬೆಳೆ ಕುರಿತು 16 ಸಂಸ್ಥೆಗಳು ಸಂಶೋಧನೆ ಆರಂಭಿಸಿದ್ದು, ಹಾನಿಕಾರಕವಲ್ಲ ಎನ್ನುವ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ ಎಂದು ಸಮಾವೇಶದ ಸಹ ಸಂಚಾಲಕ ಮಲ್ಲಿಕಾರ್ಜುನ ಹಕ್ರೆ ಹೇಳಿದರು. ಗುತ್ತಿಗೆ ಆಧಾರದಲ್ಲಿ ಪ್ಲಾಂಟೇಷನ್ ಕ್ರಾಪ್ ಬೆಳೆಯಲು ಅರಣ್ಯ ಭೂಮಿಯಲ್ಲಿ ಅವಕಾಶ ನೀಡಲಾಗುತ್ತಿದೆ. ಕಾಳುಮೆಣಸು, ರಬ್ಬರ್, ಗೇರು ಬೆಳೆಯಬಹುದು. ಶಿವಮೊಗ್ಗ ಜಿಲ್ಲೆಯ ಅಡಕೆ ಬೆಳೆಗಾರರಿಗೆ ಅವಕಾಶ ನೀಡಿದರೆ 50 ಸಾವಿರಕ್ಕೂ ಅಧಿಕ ಜನರಿಗೆ ಅನುಕೂಲವಾಗುತ್ತದೆ ಎಂದರು.
ಅಡಕೆ ಬೆಳೆಗಾರರ ಸಮಾವೇಶದ ಗೌರವಾಧ್ಯಕ್ಷ ಎಚ್.ಎಸ್.ಮಂಜಪ್ಪ ಸೊರಬ ಅವರನ್ನು ಸ್ವಾಗತ ಸಮಿತಿಯಿಂದ ಸನ್ಮಾನಿಸಲಾಯಿತು. ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ತೋಟಗಾರ್ಸ್ ಸೊಸೈಟಿ ಅಧ್ಯಕ್ಷ ಕೆ.ಸಿ.ದೇವಪ್ಪ, ಯು.ಎಚ್.ರಾಮಪ್ಪ, ಅನಿಲ್ ಒಡೆಯರ್, ಕೆ.ಎಂ.ಸೂರ್ಯನಾರಾಯಣ ಖಂಡಿಕಾ, ಆರ್.ಎಸ್.ಗಿರಿ, ಸ್ಮರಣ ಸಂಚಿಕೆ ಪ್ರಧಾನ ಸಂಪಾದಕ ಮಾ.ವೆಂ.ಸ.ಪ್ರಸಾದ್, ರಾಜೇಂದ್ರ ಖಂಡಿಕಾ ಇತರರಿದ್ದರು.