

ಆನಂದಪುರ: ಮಾದಕ ವ್ಯಸನಗಳಿಂದ ಅನೇಕ ಬಗೆ ರೋಗಗಳು ತಗುಲಿ ಜೀವಕ್ಕೆ ಅಪಾಯ ಉಂಟಾಗುತ್ತದೆ ಎಂದು ಪಿಎಸ್‌ಐ ಪ್ರವೀಣ್ ಹೇಳಿದರು.
ಮುರುಘಾ ಮಠದಲ್ಲಿ ಏರ್ಪಡಿಸಿದ್ದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಮಾದಕ ವ್ಯಸನ ಕುರಿತು ಮಾತನಾಡಿ, ಮಕ್ಕಳು ಮತ್ತು ಯುವಕರು ಬಹುಬೇಗ ಮಾದಕ ವಸ್ತುಗಳಿಗೆ ಆಕರ್ಷಿತರಾಗುತ್ತಾರೆ. ಆರಂಭದಲ್ಲಿ ಅಲ್ಪ ಸ್ವಲ್ಪ ಸೇವಿಸುವ ಮಾದಕ ವಸ್ತುಗಳ ಪ್ರಮಾಣ ಕ್ರಮೇಣ ಹೆಚ್ಚಾಗುತ್ತದೆ. ಇದು ದೇಹ ಮತ್ತು ಮನಸ್ಸನ್ನು ಘಾಸಿಗೊಳಿಸುತ್ತದೆ ಎಂದು ತಿಳಿಸಿದರು.
ಮಾದಕ ಪದಾರ್ಥಗಳ ಮಾರಾಟ ಮತ್ತು ಸರಬರಾಜು ಅಪರಾಧ ಕೃತ್ಯ. ಜೀವಾವಧಿ ಶಿಕ್ಷೆಯಂತಹ ಕಠಿಣ ಶಿಕ್ಷೆ ಕಾನೂನು ಇದೆ. ಮಾದಕ ವ್ಯಸನದಿಂದ ಮುಕ್ತರಾಗಿ ಬದುಕುವ ಬಗ್ಗೆ ಪ್ರತಿಯೊಬ್ಬರೂ ಪ್ರತಿಜ್ಞಾಬದ್ಧರಾಗಿ ಜೀವಿಸಬೇಕು ಎಂದರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಿಜ್ವಾನ್ ಮಾತನಾಡಿ, ಮಣ್ಣಿನ ಲವತ್ತತೆ ನಮ್ಮ ಕೈಯಲ್ಲಿದೆ. ಅತಿಯಾದ ರಸಗೊಬ್ಬರ ಮತ್ತು ಔಷಧಗಳ ಬಳಕೆ ಮಣ್ಣನ್ನು ದಿನೇದಿನೆ ಕೊಲ್ಲುತ್ತದೆ. ಮಣ್ಣಿನಲ್ಲಿ ಬೆಳೆದ ಆಹಾರ ಪದಾರ್ಥ ಆರೋಗ್ಯಕ್ಕೆ ಉತ್ತಮ ಎಂದರು. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ರೈತರು ಸಾವಯವ ಕೃಷಿ ಪಾಲಿಸಿದರೆ ಜನರ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.