ತೀರ್ಥಹಳ್ಳಿ: ತಾಲೂಕಿನಾದ್ಯಂತ ಗಾಳಿ ಸಹಿತ ಮಳೆಯಾಗುತ್ತಿದ್ದು, ಎರಡು ದಿನಗಳಿಂದ ತಾಲೂಕಿನಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ.
ನಾಲೂರು ಗ್ರಾಪಂ ವ್ಯಾಪ್ತಿಯ ಕೊಳಗಿ ದುಗ್ಗಮ್ಮ ಎಂಬುವರ ಮನೆ ಗೋಡೆ ಕುಸಿದಿದೆ. ಅರಳಸುರುಳಿ ಸಮೀಪದ ಶಂಕರಪುರ ಗ್ರಾಮದ ಸವಿತಾ ವಿಜಯಕುಮಾರ್ ಎಂಬುವರ ಕೊಟ್ಟಿಗೆ ಮಳೆಯಿಂದ ಕುಸಿದಿದೆ. ರಾಘವೇಂದ್ರ ಅವರ ಮನೆ ಛಾವಣಿ ಮತ್ತು ಗೋಡೆ ಕುಸಿದಿದೆ.
ಸಿಂಗನಬಿದಿರೆ ಗ್ರಾಪಂ ವ್ಯಾಪ್ತಿಯ ಸ್ವಸ್ತಿಗದ್ದೆ ಗ್ರಾಮದ ಶೋಭಾ ಚಂದ್ರ ಎಂಬುವರ ಮನೆ ಮೇಲೆ ಮರ ಬಿದ್ದು ಛಾವಣಿ ಹಾನಿಗೀಡಾಗಿದೆ. ಶೇಡ್ಗಾರು ಗ್ರಾಮದ ನಾಗೇಶ ಎಂಬುವರ ಮನೆಗೆ ಭಾಗಶಃ ಹಾನಿಯಾಗಿದೆ. ಹಾರೋಗುಳಿಗೆ ಗ್ರಾಪಂ ವೃತ್ತದ ಅಂದಗೆರೆ ಗ್ರಾಮದಲ್ಲಿ ಮರ ಬಿದ್ದು ಮೂರ್ತಿ ಆಚಾರ್ ಎಂಬುವರ ಮನೆ ಮತ್ತು ಕೊಟ್ಟಿಗೆಗೆ ಹಾನಿಯಾಗಿದೆ. ಹಾನಿ ಸಂಭವಿಸಿರುವ ಪ್ರದೇಶಗಳಿಗೆ ಭೇಟಿ ನೀಡಿರುವ ಕಂದಾಯ ಇಲಾಖೆ ಅಧಿಕಾರಿಗಳು ನಷ್ಟದ ವರದಿ ಸಿದ್ಧಪಡಿಸಿದ್ದಾರೆ.