

ಸಾಗರ: ಷೇರುದಾರರ ಹಿತ ಕಾಪಾಡುವಲ್ಲಿ ಮ್ಯಾಮ್ಕೋಸ್ ಸದಾ ಮುಂದಿರುತ್ತದೆ. ವಿಮೆ ಮೂಲಕ ಷೇರುದಾರ ಸದಸ್ಯರು ಸಂಕಷ್ಟದಲ್ಲಿದ್ದಾಗ ನೆರವಿಗೆ ಧಾವಿಸುತ್ತದೆ ಎಂದು ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಹುಲ್ಕುಳಿ ಹೇಳಿದರು.
ತಾಲೂಕಿನ ಎಂ.ಎಲ್.ಹಳ್ಳಿಯಲ್ಲಿ ಮ್ಯಾಮ್ಕೋಸ್ ಅಭಿರಕ್ಷಾ ಯೋಜನೆಯಡಿ ಸಂಘದ ಸದಸ್ಯ ಅನಂತ ಭಟ್ಟ ಅವರಿಗೆ ಸಹಾಯಧನದ ಚೆಕ್ ವಿತರಿಸಿ ಮಾತನಾಡಿ, ಅಭಿರಕ್ಷಾ ಯೋಜನೆ ಕಡಿಮೆ ವಿಮಾ ಮೊತ್ತ ಪಾವತಿಸಿ ಗರಿಷ್ಠ ಸೌಲಭ್ಯ ಪಡೆಯಲು ಅನುಕೂಲ ಕಲ್ಪಿಸುತ್ತದೆ. ಕೃಷಿ ಜಮೀನಿನಲ್ಲಿ ಕೆಲಸ ಮಾಡುವಾಗ ಮೃತಪಟ್ಟರೆ 6 ಲಕ್ಷ ರೂ.ವರೆಗೆ ಪರಿಹಾರ ಸಿಗುತ್ತದೆ. ಗಾಯಗೊಂಡರೆ ಚಿಕಿತ್ಸೆಗೆ 2ರಿಂದ 3 ಲಕ್ಷ ರೂ.ವರೆಗೆ ಧನಸಹಾಯ ಮಾಡಲಾಗುತ್ತದೆ. ತೋಟದಲ್ಲಿ ಕೆಲಸ ಮಾಡುವ ಕೃಷಿ ಕೂಲಿ ಕಾರ್ಮಿಕರಿಗೂ ಸೌಲಭ್ಯ ಸಿಗುತ್ತದೆ ಎಂದರು.
ಎಂ.ಎಲ್.ಹಳ್ಳಿಯ ಅನಂತ ಭಟ್ಟ ಅವರು ತೋಟದಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದರು. ಅವರ ಚಿಕಿತ್ಸೆಗೆ ಅಭಿರಕ್ಷಾ ಯೋಜನೆಯಡಿ 1.50 ಲಕ್ಷ ರೂ. ನೀಡಿದೆ. ಸೊರಬ ತಾಲೂಕಿನ ಮುಟುಗುಪ್ಪೆ ಗ್ರಾಮದ ಎಂ.ಕೃಷ್ಣಮೂರ್ತಿ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿಕಾರ್ಮಿಕ ಮಂಜುನಾಥ್ ಅಡಕೆ ಮರದಿಂದ ಬಿದ್ದು ಮೃತರಾಗಿದ್ದು, ಅವರ ಕುಟುಂಬಕ್ಕೆ 6 ಲಕ್ಷ ರೂ. ಪರಿಹಾರ ನೀಡಲಾಗಿದೆ. ಷೇರುದಾರ ಸದಸ್ಯರು ವಿಮೆ ಮಾಡಿಸಿಕೊಂಡರೆ ತುರ್ತು ಸಂದರ್ಭದಲ್ಲಿ ನೆರವಾಗುತ್ತದೆ ಎಂದು ಹೇಳಿದರು.
ಮ್ಯಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್, ನಿರ್ದೇಶಕರಾದ ಕೀರ್ತಿರಾಜ್ ಕೆ., ತಿಮ್ಮಪ್ಪ, ಭರ್ಮಪ್ಪ, ಸಿ.ಸಿ.ಚನ್ನಕೇಶವ, ಎಸ್.ಎಂ.ತಿಮ್ಮಪ್ಪ, ಲಕ್ಷ್ಮೀನಾರಾಯಣ, ಪ್ರಶಾಂತ್, ರಾಘವೇಂದ್ರ, ರಾಜು ಪೂಜಾರಿ ಇತರರಿದ್ದರು.