ಶಿರಾಳಕೊಪ್ಪ: ಬಾಲ್ಯದಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಕ್ಕಲ್ಲಿ ಸಂಸ್ಕಾರಯುತ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದು ರೋಟರಿ ಕ್ಲಬ್ ಶಿಕಾರಿಪುರ ಕದಂಬ ಸಂಸ್ಥೆ ಅಧ್ಯಕ್ಷ ಎ.ಎಸ್.ಶಿವಪ್ರಕಾಶ್ ಹೇಳಿದರು.
ತೊಗರ್ಸಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ನಲಿ-ಕಲಿ ಟೇಬಲ್, ಕುರ್ಚಿ, ಬೆಂಚ್ ಹಾಗೂ ಶಿಕ್ಷಣ ಸಾಮಗ್ರಿ ವಿತರಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಮೂಲ ಸೌಕರ್ಯ ಒದಗಿಸುವುದು ಸರ್ಕಾರ ಮತ್ತು ಸಂಘ ಸಂಸ್ಥೆಗಳ ಕರ್ತವ್ಯ ಎಂದು ತಿಳಿಸಿದರು.
ವಲಯ 10ರ ಸಹಾಯಕ ಗವರ್ನರ್ ಎಸ್.ಆರ್.ನಾಗರಾಜ್ ಮಾತನಾಡಿ, ದಾನಿಗಳು ನೀಡಿರುವ ವಸ್ತುಗಳು ಸದ್ಬಳಕೆ ಆಗಬೇಕು. ನಲಿ-ಕಲಿ ಕುರ್ಚಿ ಮಕ್ಕಳ ಕಲಿಕೆಗೆ ಸಹಕಾರಿಯಾಗುತ್ತದೆ ಎಂದರು. ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಸರ್ಕಾರದಿಂದ ಸೌಲಭ್ಯಗಳು ಸಿಗುತ್ತಿದ್ದರೂ ಸಂಘ ಸಂಸ್ಥೆಗಳು ಸಹ ಕೈಜೋಡಿಸಬೇಕು. ಶಿಕಾರಿಪುರ ರೋಟರಿ ಕ್ಲಬ್ ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ನೀಡಿ ಸೇವಾ ಚಟುವಟಿಕೆ ನಡೆಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಯು.ರವೀಂದ್ರನಾಥ್ ಐತಾಳ್, ಎಸ್.ಪಿ.ಶಂಕರ್, ಆನಂದ್, ರಂಗೇಗೌಡ, ಕಾರ್ಯದರ್ಶಿ ವೀರೇಂದ್ರ ವಾಲಿ, ಮುಖ್ಯಶಿಕ್ಷಕ ಬಸವರಾಜಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ್, ಮನೋಜ್ ಗೌಳಿ, ಬಸವರಾಜ್, ದಾನಿಗಳಾದ ಪುಷ್ಪಾ, ಶಿವಕುಮಾರ್, ಹಾಲಪ್ಪ ಉಪಸ್ಥಿತರಿದ್ದರು.