

ಆಯನೂರು: ಪ್ರತಿ ವರ್ಷ 29 ಕೋಟಿ ಜನರು ಮಲೇರಿಯಾ ಸೋಂಕಿಗೆ ಒಳಗಾಗುತ್ತಿದ್ದು, 4 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ ಎಂದು ಆಯನೂರು ಸಮುದಾಯ ಕೇಂದ್ರದ ಆರೋಗ್ಯ ನಿರೀಕ್ಷಕ ಶೇರ್ ಆಲಿ ಖಾನ್ ಹೇಳಿದರು.
ಕೋಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಲೇರಿಯಾ ಇರುವ ಜನರು ಸಾಮಾನ್ಯವಾಗಿ ತೀವ್ರ ಜ್ವರ ಮತ್ತು ಚಳಿಯೊಂದಿಗೆ ತುಂಬ ಅಸ್ವಸ್ಥರಾಗುತ್ತಾರೆ. ಮಲೇರಿಯಾ ರೋಗವು ಪರಾವಲಂಬಿ ಅನಾಫಿಲೀಸ್ ಎಂಬ ಸೋಂಕಿತ ಹೆಣ್ಣು ಸೊಳ್ಳೆಗಳ ಕಡಿತದ ಮೂಲಕ ಮನುಷ್ಯರಿಗೆ ಹರಡುತ್ತದೆ ಎಂದು ತಿಳಿಸಿದರು.
ಮಲೇರಿಯಾ ಸೋಂಕು ಕಡಿಮೆ ಮಾಡಲು, ಸೊಳ್ಳೆ ಕಡಿತದಿಂದ ಜನರನ್ನು ರಕ್ಷಿಸಲು ಔಷಧಗಳು ಮತ್ತು ಕೀಟನಾಶಕಗಳಿಂದ ಸಂಸ್ಕರಿಸಿದ ಬೆಡ್‌ನೆಟ್ ವಿತರಿಸುತ್ತೇವೆ. ಮಲೇರಿಯಾ ರೋಗಕ್ಕೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ ಎಂದರು.
ಸಾಂಕ್ರಾಮಿಕ ರೋಗಗಳ ಮುಂಜಾಗ್ರತೆ ಕುರಿತು ನರ್ಸಿಂಗ್ ವಿದ್ಯಾರ್ಥಿಗಳು ಕಿರುನಾಟಕ ಪ್ರದರ್ಶಿದರು. ಗ್ರಾಮಸ್ಥರಿಗೆ ಬಿಪಿ, ಶುಗರ್, ಪಲ್ಸ್ ಹಾಗೂ ತೂಕ ಅಳತೆ ಮಾಡಲಾಯಿತು. ಉಪನ್ಯಾಸಕರಾದ ಮೇರಿ ಅಬ್ರಹಾಂ, ಶೋಭಾ, ಆಶಾ ಇತರರಿದ್ದರು.