

ರಿಪ್ಪನ್‌ಪೇಟೆ: ಅಂತರ್ಜಲ ವೃದ್ಧಿಗೆ ಹೊಳೆ, ಹಳ್ಳ, ನದಿಗಳಿಗೆ ಬ್ಯಾರೇಜ್ ನಿರ್ಮಾಣ ಮಾಡುವುದು ಅಗತ್ಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಅರಸಾಳು ಗ್ರಾಪಂ ವ್ಯಾಪ್ತಿ ಸ.ನಂ.60ರ ಹತ್ತಿರ ಕುಮದ್ವತಿ ನದಿಗೆ 1.40 ಕೋಟಿ ರೂ. ಅನುದಾನದಲ್ಲಿ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ನದಿಗಳಲ್ಲಿ ಹೂಳು ತುಂಬಿಕೊಂಡು ಮೊದಲಿದ್ದ ಆಳವನ್ನು ಕಳೆದುಕೊಂಡಿವೆ. ಮಳೆ ನೀರು ಸರಾಗವಾಗಿ ಹರಿದು ಹೋಗುತ್ತದೆ. ಇದರಿಂದ ಜಲಮೂಲಗಳಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ನೋಡುವಂತಾಗಿದೆ ಎಂದು ತಿಳಿಸಿದರು.
ಬ್ಯಾರೇಜ್ ನಿರ್ಮಾಣ ಮಾಡುವುದರಿಂದ ನೀರು ನಿಂತು ಹರಿಯಲು ಅನುಕೂಲವಾಗುತ್ತದೆ. ಹರಿವು ಕ್ಷೀಣಿಸಿದಾಗ ಬ್ಯಾರೇಜ್‌ನಲ್ಲಿ ಸಂಗ್ರಹವಾದ ನೀರನ್ನು ಕೃಷಿ ಬಳಕೆಗೆ ಉಪಯೋಗಿಸಬಹುದು. ಇದರಿಂದ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುತ್ತದೆ ಹಾಗೂ ಸುತ್ತಮುತ್ತಲಿನ ಪರಿಸರ ಹಸಿರಾಗುತ್ತದೆ ಎಂದರು.
ಅರಸಾಳು ಗ್ರಾಪಂ ಅಧ್ಯಕ್ಷೆ ಎಂ.ಜಯಮ್ಮ, ಮುಖಂಡರಾದ ಈಶ್ವರಪ್ಪ ಗೌಡ, ಚಂದ್ರಮೌಳಿ, ವಿನಯ್ ಕುಮಾರ್, ನಾರಾಯಣಪ್ಪ, ಅರುಣ, ಮಲ್ಲಿಕಾರ್ಜುನ, ಗಾಯತ್ರಿ, ನಾರಾಯಣ ಇತರರಿದ್ದರು.