

ತ್ಯಾಗರ್ತಿ: ಗ್ರಾಮೀಣ ಪ್ರದೇಶದಲ್ಲಿ ರಕ್ತದಾನದ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ಭಾರತೀಯ ರೆಡ್‌ಕ್ರಾಸ್‌ನ ಸಾಗರ ತಾಲೂಕು ಶಾಖೆ ಕಾರ್ಯದರ್ಶಿ ಮೇಜರ್ ಎಂ.ನಾಗರಾಜ್ ಹೇಳಿದರು.
ಸಮೀಪದ ನೀಚಡಿಯಲ್ಲಿ ರಾಮಚಂದ್ರಾಪುರ ಮಂಡಲ, ಕಾನುಗೋಡು ಹವ್ಯಕ ವಲಯ, ನೀಚಡಿ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ರೋಟರಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಿಂದ ಆಯೋಜಿಸಿದ್ದ ರಕ್ತಬಂಧ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಜನರಲ್ಲಿ ರಕ್ತದಾನದ ಬಗ್ಗೆ ಭಯ ಹೋಗಲಾಡಿಸಲು ಸಾಮೂಹಿಕ ರಕ್ತದಾನ ಒಂದು ಉತ್ತಮ ವೇದಿಕೆ. ರಕ್ತನಿಧಿ ಕೇಂದ್ರಗಳಿಗೆ ಹೆಚ್ಚಿನ ರಕ್ತ ಒದಗಿಸಲು ಸಾಮೂಹಿಕ ರಕ್ತದಾನ ಅವಶ್ಯಕ. 100ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಅನೇಕರು ಇಂದಿಗೂ ಆರೋಗ್ಯವಾಗಿಯೇ ಇದ್ದಾರೆ. ರೋಟರಿ ಮತ್ತು ರೆಡ್‌ಕ್ರಾಸ್ ಸಂಸ್ಥೆಗಳು ರಕ್ತ ಸಂಗ್ರಹಕ್ಕೆ ಪೂರಕ ಸೌಲಭ್ಯ ಒದಗಿಸುತ್ತಿವೆ ಎಂದರು.
ಕಾನುಗೋಡು ಹವ್ಯಕ ವಲಯದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ತುರ್ತು ಸಂದರ್ಭ ನಮಗೆ ರಕ್ತದ ಕೊರತೆ ಉಂಟಾಗದಂತೆ ಸಂಘಟನಾತ್ಮಕವಾಗಿ ರಕ್ತಬಂಧ ಯೋಜನೆಯನ್ನು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಜಾರಿಗೆ ತಂದಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಗ್ರಾಮೀಣ ಪ್ರದೇಶದಲ್ಲೂ ಅನೇಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿರುವುದು ಸಂತಸದ ಸಂಗತಿ ಎಂದು ಹೇಳಿದರು.
53 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ನೀಚಡಿ ಟ್ರಸ್ಟ್ ಅಧ್ಯಕ್ಷ ಎಸ್.ಎಂ.ಶಿವಪ್ರಕಾಶ್, ರಕ್ತಬಂಧ ಯೋಜನೆ ಸಂಚಾಲಕ ಬಿ.ಎನ್.ಕಿರಣ್, ಎನ್.ಟಿ.ಯೋಗೀಶ್, ಪ್ರಮುಖರಾದ ಪ್ರಸನ್ನ ಉಡುಚೆ, ಬಿ.ಜಿ.ಅನಂತಮೂರ್ತಿ, ಎನ್.ಎ.ದತ್ತಮೂರ್ತಿ, ಶ್ಯಾಮಲಾ ನಾರಾಯಣಮೂರ್ತಿ ಇದ್ದರು.