ಆನಂದಪುರ: ಸಮೀಪದ ಗಿಳಾಲಗುಂಡಿ ಗ್ರಾಮದ ಸಮೀಪ ಇರುವ ಕೊಲ್ಲಿಬಚ್ಚಲು ಅಣೆಕಟ್ಟು ಭರ್ತಿಯಾಗಿ ಗುರುವಾರ ಬೆಳಗ್ಗೆಯಿಂದ ಉಕ್ಕಿ ಹರಿಯುತ್ತಿದೆ.
ಕಳೆದ ವರ್ಷ ಜುಲೈ ಎರಡನೇ ವಾರ ಭರ್ತಿಯಾಗಿದ್ದ ಅಣೆಕಟ್ಟು ಈ ವರ್ಷ ವಾಡಿಕೆಗಿಂತ ಮೊದಲೆ ತುಂಬಿದೆ. ಮೇ 20ರಿಂದ ಮುಂಗಾರುಪೂರ್ವ ಮಳೆ ಸಾಕಷ್ಟು ಸುರಿದಿದ್ದ ಕಾರಣ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಭೂಮಿ ಹದಗೊಂಡಿತ್ತು. ಅಣೆಕಟ್ಟೆಗೆ ಹರಿದು ಬರುವ ಕೋಣೆಹೊಸೂರಿನ ಹಳ್ಳ ಪೂರ್ಣಗೊಂಡು ಹರಿಯಲಾರಂಭಿಸಿತ್ತು.
ಅಣೆಕಟ್ಟೆಯಿಂದ ಉಕ್ಕಿದ ನೀರು ಅರ್ಧ ಭಾಗ ಗಿಳಾಲಗುಂಡಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಅಮ್ಮನ ಕೆರೆಗೆ ಹಾಗೂ ಇನ್ನರ್ಧ ಭಾಗ ತಂಗಳವಾಡಿ ಮೂಲಕ ಹೊಸಕೊಪ್ಪ ಗ್ರಾಮ ತಲುಪಿ ಆರು ಕಟ್ಟಿನ ಹಳ್ಳದ ಮೂಲಕ ಅಂಬ್ಲಿಗೊಳ ಜಲಾಶಯ ಸೇರುತ್ತಿದೆ. 2008ರಲ್ಲಿ ನೀರಾವರಿ ಉದ್ದೇಶದಿಂದ ಅಣೆಕಟ್ಟು ನಿರ್ಮಿಸಲಾಗಿತ್ತು. ಸುತ್ತ ದಟ್ಟ ಅರಣ್ಯದಿಂದ ಕೂಡಿರುವ ಅಣೆಕಟ್ಟು ವೀಕ್ಷಣೆಗೆ ರಸ್ತೆ ಮಾರ್ಗವಿದೆ.