ಸೊರಬ: ತಾಲೂಕಿನ ಯಲಸಿ ಗ್ರಾಮದ ದೊಡ್ಡಕೆರೆ ಹೆಗ್ಗೆರೆಯಲ್ಲಿ ಗುರುವಾರ ಜನಪದ ಕ್ರೀಡೆ ಮೀನು ಶಿಕಾರಿ ಭರ್ಜರಿಯಾಗಿತ್ತು. ಕಳೆದ ವಾರ ಸತತ ಮಳೆಯಾಗಿದ್ದು, ಎರಡ್ಮೂರು ದಿನದಿಂದ ಮಳೆ ಬಿಡುವು ನೀಡಿತ್ತು. ಬುಧವಾರ ರಾತ್ರಿ ಭಾರಿ ಮಳೆಯಾಗಿ ಕೆರೆ ತುಂಬಿದ್ದರೂ ನೂರಾರು ಜನರು ಎದೆಗುಂದದೆ ಕೆರೆಬೇಟೆಯಲ್ಲಿ ಪಾಲ್ಗೊಂಡರು.
ಮಲೆನಾಡಿನ ಗ್ರಾಮೀಣ ಕ್ರೀಡೆಯಾಗಿರುವ ಕೆರೆಬೇಟೆಯಲ್ಲಿ ಪಾಲ್ಗೊಳ್ಳುವವರು ಏಕಕಾಲದಲ್ಲಿ ಕೆರೆಗೆ ಇಳಿದು ಮೀನುಗಳನ್ನು ಹಿಡಿಯುವುದನ್ನು ನೋಡಲು ನೂರಾರು ಜನ ಆಗಮಿಸುತ್ತಾರೆ. ಮಳೆಗಾಲದ ಸಂದರ್ಭ ಕೆರೆಗಳಿಗೆ ಮೀನಿನ ಮರಿಗಳನ್ನು ಬಿಡಲಾಗುತ್ತದೆ. ನಂತರ ಬೇಸಿಗೆಯಲ್ಲಿ ಕೆರೆಗಳು ಬತ್ತಿದಾಗ ಕೆರೆಬೇಟೆ ಸಾರಲಾಗುತ್ತದೆ.
ಗ್ರಾಮದಲ್ಲಿ ನಡೆದ ಕೆರೆಬೇಟೆಯಲ್ಲಿ ಕೂಣಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಕೆಲವರಿಗೆ 15 ಕೆ.ಜಿ.ವರೆಗೆ ಮೀನು ಲಭಿಸಿತು. ಕೂಣಿ ಹಿಡಿದು ಕೆರೆಗೆ ಇಳಿದವರು ಕೆರೆಬೇಟೆ ಮಾಡಿ ತೆರಳಿದರು. ಕೆಲವರು 15ರಿಂದ 20 ಕೆ.ಜಿ.ವರೆಗೆ ಮೀನುಗಳನ್ನು ಹಿಡಿದು ಸಂಭ್ರಮಿಸಿದರು. ಕೆರೆಬೇಟೆಯಲ್ಲಿ ಯಲಸಿ, ಹುಲ್ತಿಕೊಪ್ಪ, ಕೊರಕೋಡು, ಗುನ್ನೂರು, ಕಾರೆಹೊಂಡ, ಕೊಡಕಣಿ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.