

ಸಾಗರ: ತಾಲೂಕಿನ ಭಾರಂಗಿ ಹೋಬಳಿ ಮಂಗನ ಕಾಯಿಲೆ ಮುಕ್ತವಲಯ ಆಗಬೇಕು. ಈ ಕುರಿತು ಜನರು ಹೆಚ್ಚಿನ ಜಾಗೃತಿ ವಹಿಸಬೇಕು. ಇಲಾಖೆ ನೀಡುವ ಸಲಹೆಗಳನ್ನು ಪಾಲಿಸಬೇಕು ಎಂದು ಸಾಗರ ಎಜ್ಯುಕೇಷನ್ ಡೆವಲಪ್‌ಮೆಂಟ್ ಸೊಸೈಟಿ ಸಂಯೋಜಕಿ ಮಾನಸಾ ಹೇಳಿದರು.
ತಾಲೂಕಿನ ಕರೂರು ಹೋಬಳಿ ಕಾರಣಿ ಗ್ರಾಮದಲ್ಲಿ ಡೆವಲಪ್‌ಮೆಂಟ್ ಸೊಸೈಟಿಯಿಂದ ಮಂಗನ ಕಾಯಿಲೆ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿ, ಕೆಎಫ್‌ಡಿ ಕುರಿತು ಭಯ ಬೇಡ, ಆದರೆ ಜಾಗ್ರತೆ ವಹಿಸುವುದನ್ನು ಮರೆಯಬಾರದು. ಮಳೆ ಆರಂಭ ಆಗುವವರೆಗೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮಸ್ಥರು ಜ್ವರ ಬಂದರೆ ತಕ್ಷಣ ತಪಾಸಣೆ ಮಾಡಿಸಿಕೊಳ್ಳಬೇಕು. ಜಿಲ್ಲೆಯ ವಿವಿಧೆಡೆ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಕಾಯಿಲೆ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕರೂರು ಮತ್ತು ಭಾರಂಗಿ ಹೋಬಳಿಯನ್ನು ಕೆಎಫ್‌ಡಿ ಮುಕ್ತವಾಗಿಸಲು ಪಣತೊಡಬೇಕು ಎಂದು ಮನವಿ ಮಾಡಿದರು.
ಗ್ರಾಮಸ್ಥರಿಗೆ ಪ್ರಥಮ ಚಿಕಿತ್ಸಾ ಕಿಟ್ ವಿತರಿಸಿ ಮಾತನಾಡಿದ ಸಂಸ್ಥೆ ನಿರ್ದೇಶಕ ಸಂತೋಷ್ ಲಿಂಗನಮಕ್ಕಿ, ಜ್ವರ ಸೇರಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಂಡುಬಂದಾಗ ವೈದ್ಯರ ಬಳಿ ಚಿಕಿತ್ಸೆ ಪಡೆದರೆ ರೋಗಮುಕ್ತರಾಗಲು ಸಾಧ್ಯವಿದೆ ಎಂದರು. ಸಂಸ್ಥೆ ನಿರ್ದೇಶಕಿ ವಿದ್ಯಾಶ್ರೀ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಎಸ್‌ಡಿಎಂಸಿ ಪ್ರಮುಖರು ಉಪಸ್ಥಿತರಿದ್ದರು.