

ರಿಪ್ಪನ್‌ಪೇಟೆ: ಮನುಷ್ಯ ಸ್ವಾರ್ಥ ಭಾವನೆ ತೊರೆದಾಗ ಜೀವನದಲ್ಲಿ ನೆಮ್ಮದಿಯಿಂದ ಬದುಕಬಲ್ಲ ಎಂದು ಮಳಲಿ ಮಠದ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಮಸರೂರು ಪೂಜಾರಗೊಪ್ಪದಲ್ಲಿ ಶ್ರೀ ವೀರಭದ್ರಸ್ವಾಮಿಗೆ ರುದ್ರಾಭಿಷೇಕ, ಕೆಂಡಾರ್ಚನೆ ಅಂಗವಾಗಿ ಏರ್ಪಡಿಸಿದ್ದ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಜಗತ್ತು ಭಗವಂತನ ಕೊಡುಗೆ. ಯಾವುದೇ ಭೇದಭಾವವಿಲ್ಲ. ಅಲ್ಪಕಾಲಕ್ಕಾಗಿ ಭೂಮಿಯಲ್ಲಿ ಜನಿಸಿದ ಮನುಷ್ಯ ಎಲ್ಲರೊಳಗೊಂದಾಗಿ ಸ್ನೇಹದಿಂದ ಜೀವನ ಸಾಗಿಸುವುದು ಅತ್ಯಂತ ಅಗತ್ಯ. ಬದುಕಿರುವಷ್ಟು ದಿನ ಪರೋಪಕಾರ, ಸರ್ವರಲ್ಲೂ ಸ್ನೇಹಭಾವದಿಂದ ಬದುಕಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎಸ್.ಪುಟ್ಟಸ್ವಾಮಿ ಗೌಡ ಕಗ್ಗಲಿ, ಕಾರ್ಯದರ್ಶಿ ಎಚ್.ಬಿ.ಜಗದೀಶ್ ಹಾರಂಬಳ್ಳಿ, ಮಹೇಶ್‌ಮೂರ್ತಿ, ಗಣೇಶ್ ಗೌಡ, ಮುರುಗೇಶ ಗೌಡ, ಕಗ್ಗಲಿ ಪ್ರಕಾಶ್, ಡಾ. ಗಣೇಶ್ ಆರ್.ಕೆಂಚನಾಲ್, ಎಸ್.ವೀರೇಶ್ ಇತರರಿದ್ದರು.