ಸೊರಬ: ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಾದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ. ನೇತ್ರಾವತಿ ಅಭಿಪ್ರಾಯಪಟ್ಟರು.

ಸರ್ಕಾರಿ ಪದವಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಗುರಿ ತಲುಪಲು ಸಾಕಷ್ಟು ಶ್ರಮವಹಿಸಿ ಮುನ್ನಡೆಯಬೇಕು. ಹಂತಹಂತವಾಗಿ ಗುರಿ ಕಡೆ ಸಾಗಬೇಕು. ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.
ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಮಮತಾ ನಾಯಕ್ ಮಾತನಾಡಿ, ಕಾಲೇಜಿನ ಪ್ರತಿಯೊಂದು ಕ್ಷಣಗಳೂ ಭವಿಷ್ಯದಲ್ಲಿ ನೆನಪಿನ ಬುತ್ತಿ ಆಗಲಿದೆ. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಆಯೋಜಿಸುವ ಪ್ರತಿಯೊಂದು ವೇದಿಕೆಯನ್ನೂ ಬಳಸಿಕೊಳ್ಳಬೇಕು. ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳುವುದು ನೀವು ಶಿಕ್ಷಕರಿಗೆ ಕೊಡುವ ಉಡುಗೊರೆ ಎಂದರು.
ವಿದ್ಯಾರ್ಥಿಗಳು ಪದವಿ ಕಾಲೇಜಿನ ಅನುಭವಗಳನ್ನು ಹಂಚಿಕೊಂಡರು. ಭುವನ್, ಸವಿನಾ, ಐಶ್ವರ್ಯಾ, ಸೌಮ್ಯಾ, ಗ್ರಂಥಪಾಲಕ ಡಾ. ಕಿರಣಕುಮಾರ್, ಉಪನ್ಯಾಸಕ ಟಿ.ರಾಘವೇಂದ್ರ, ರವಿ ಕಲ್ಲಂಬಿ, ವಿದ್ಯಾರ್ಥಿಗಳು ಇದ್ದರು.