

ತೀರ್ಥಹಳ್ಳಿ: ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ಕಚೇರಿಯಲ್ಲಿರುವ ದಾಖಲೆಗಳೇ ಮಾಯವಾಗಿದ್ದು, ಕಚೇರಿಯಲ್ಲಿ ಶಾಶ್ವತವಾಗಿ ಇರಬೇಕಾದ ಸಾರ್ವಜನಿಕರ ಮೂಲ ದಾಖಲೆಗಳೇ ಮಾಯವಾಗಿವೆ. ತಾಲೂಕು ಕಚೇರಿಯಲ್ಲಿ ಬಿಗಿ ಹಿಡಿತ ಹೊಂದಿರುವ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆಡಳಿತ ಕಠಿಣ ಕ್ರಮ ಜರುಗಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕು ಕಚೇರಿಯಲ್ಲಿ ತಾಲೂಕಿನ ಗ್ರಾಮ ಆಡಳಿತದಲ್ಲಿ ಮಾಡಿರುವ ಉತ್ತಮ ಕಾರ್ಯನಿರ್ವಹಣೆ ಆಧಾರದಲ್ಲಿ 20 ಗ್ರಾಮ ಲೆಕ್ಕಿಗರಿಗೆ ಕಂದಾಯ ಇಲಾಖೆಯಿಂದ ಮಂಜೂರಾಗಿರುವ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿ, ಸಮಾಜದ ಎಲ್ಲರಿಗೂ ಸರ್ಕಾರ ಮತ್ತು ಇಲಾಖೆ ಬಗ್ಗೆ ನಂಬಿಕೆ ಬರುವ ರೀತಿ ಸರ್ಕಾರಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಿದೆ. ಗ್ರಾಮ ಲೆಕ್ಕಿಗರ ಶಕ್ತಿ ಬಲವರ್ಧನೆ ಅಗತ್ಯ. ಆಧುನಿಕತೆ ಯುಗದಲ್ಲಿ ಡಿಜಿಟಲೀಕರಣ ಅನಿವಾರ್ಯ ಎಂದು ತಿಳಿಸಿದರು.
ಕಂದಾಯ ಇಲಾಖೆಯಲ್ಲಿರುವ ದಾಖಲೆಗಳು ಅತ್ಯಂತ ಮಹತ್ವದ್ದಾಗಿದೆ. ಅವುಗಳನ್ನು ಶಾಶ್ವತವಾಗಿ ರಕ್ಷಣೆ ಮಾಡುವ ಹೊಣೆಗಾರಿಕೆ ಸಂಬಂಧಿಸಿದ ಸಿಬ್ಬಂದಿ ಮೇಲಿದೆ. ಆದರೆ ಇಲ್ಲಿನ ಕಂದಾಯ ಇಲಾಖೆಯ ಬಹುತೇಕ ದಾಖಲೆಗಳೇ ಮಾಯವಾಗಿವೆ. ಅಗತ್ಯ ದಾಖಲೆಗೆ ಸಾಮಾನ್ಯರು ತಾಲೂಕು ಕಚೇರಿಗೆ ಅಲೆಯುವಂತಾಗಿದೆ. ಆದರೆ ಇದಕ್ಕೆ ಪರಿಹಾರವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆರಗ ಜ್ಞಾನೇಂದ್ರ ಶಾಸಕ
ಕಚೇರಿಯಲ್ಲಿ ಶಾಶ್ವತವಾಗಿ ಇರಬೇಕಾದ ಸಾರ್ವಜನಿಕ ದಾಖಲೆಗಳು ಮಾಯವಾಗುವುದಕ್ಕೆ ಇಲಾಖೆಯ ಕೆಲ ಭ್ರಷ್ಟ ಸಿಬ್ಬಂದಿ ಸಹಕಾರ ಕಾರಣವಾಗಿದೆ. ಇವರ ನೆರವಿನಿಂದ ಅವಕಾಶವಾದಿ ಮಧ್ಯವರ್ತಿಗಳು ಮೂಲ ದಾಖಲೆಗಳನ್ನು ಅಪಹರಿಸಿದ್ದಾರೆ. ಹೀಗಾಗಿ ಭೂಮಿ ಮನೆ ನಿವೇಶನಗಳ ಮೂಲ ದಾಖಲೆಗಳೇ ಇಲ್ಲ. ಇದಕ್ಕೆ ಪರಿಹಾರವೂ ಇಲ್ಲದೇ ಜನರು ಪರಿತಪಿಸುವಂತಾಗಿದೆ. ಮುಂದೆ ಹೀಗಾಗದಂತೆ ಕ್ರಮ ವಹಿಸಬೇಕು ಎಂದರು.
ತಹಸೀಲ್ದಾರ್ ಎಸ್.ರಂಜಿತ್ ಮಾತನಾಡಿ, ಕಚೇರಿಯಲ್ಲಿ ಎಲ್ಲ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಇಡಲು ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಆದರೆ ಈ ಹಿಂದೆ ಆಗಿರುವ ಹಾನಿಯಿಂದ ಸಾಕಷ್ಟು ಮೂಲ ದಾಖಲೆಗಳೇ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ತಿಳಿಸಿದರು. ಉಪತಹಸೀಲ್ದಾರ್ ಸತ್ಯಮೂರ್ತಿ ಇದ್ದರು.