ಭದ್ರಾವತಿ: ಹಿರಿಯರು ತನು, ಮನ, ಧನದಿಂದ ಸಮಾಜವನ್ನು ಕಟ್ಟಲು ಮುಂದಾದವರು. ಮನೆಗಿಂತ ಸಮಾಜಕ್ಕೆ ಒತ್ತುಕೊಟ್ಟಿದ್ದರು. ಆದರೆ ಇತ್ತೀಚೆಗೆ ಮನುಷ್ಯ ತುಂಬ ಸ್ವಾರ್ಥಿಯಾಗುತ್ತಿದ್ದಾನೆ ಎಂದು ಹೊಸದುರ್ಗ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಶಿವ ವಿವಿಧೋದ್ದೇಶ ಸಹಕಾರ ಸಂಘದ ರಜತ ಮಹೋತ್ಸವ ಸಂಭ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಮನುಷ್ಯ ತನ್ನದೇ ಕೋಟೆ ಕಟ್ಟಿಕೊಂಡು ತನ್ನಂತೆ ಬೇರೆಯವರಿಲ್ಲ ಎಂಬ ಅಹಂಕಾರ ಬೆಳೆಸಿಕೊಳ್ಳುತ್ತಿದ್ದಾನೆ. ಇದರಿಂದ ಸಮಾಜ, ವ್ಯಕ್ತಿ ಮೂಲೆ ಗುಂಪಾಗುತ್ತಿರುವುದು ದುರಂತ ಎಂದರು.
ಸಂಪತ್ತಿನ ಹಿಂದೆ ಓಡಿದರೆ ಅಪಾಯ: ಮನುಷ್ಯ ಇಂದು ಸಂಪತ್ತಿನ ಹಿಂದೆ ಓಡುತ್ತಿದ್ದು, ಅತಿಯಾದರೆ ಅಪಾಯ ತಪ್ಪಿದ್ದಲ್ಲ. ಆಶೋತ್ತರಗಳಿಗೆ ಕಡಿವಾಣ ಹಾಕಿಕೊಳ್ಳುವ ಮೂಲಕ ಬಸವಣ್ಣ ಅವರ ವಚನಗಳನ್ನು ನೆನಪು ಮಾಡಿಕೊಳ್ಳಬೇಕು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ ಎಂದು ಸಾಲ ತೆಗೆದುಕೊಳ್ಳುವುದೇ ಉದ್ಯೋಗ ಮಾಡಿಕೊಳ್ಳಬಾರದು. ಪಾವತಿಯ ಎಚ್ಚರಿಕೆಯೂ ಇರಬೇಕು ಎಂದರು. ಅನ್ನ, ಹಾಲು, ನೀರು ಸೇರಿ ನಾವು ನಿತ್ಯ ವಿಷಯುಕ್ತ ಆಹಾರ ಸೇವನೆ ಮಾಡುತ್ತಿದ್ದೇವೆ. ಸಾವಯವ ಕೃಷಿ ಮಾಡಲು ರೈತರು ಮುಂದಾದಲ್ಲಿ ಮಾತ್ರ ನಾವೆಲ್ಲರೂ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.
ರಜತ ಮಹೋತ್ಸವ ಸಂಭ್ರಮದಲ್ಲಿರುವ ಸಂಘವು 25 ಕೋಟಿ ರೂ. ವ್ಯವಹಾರ ನಡೆಸಿ 26 ಲಕ್ಷ ರೂ. ಆದಾಯ ಗಳಿಸಿದೆ. ಆದಾಯ ಎಷ್ಟು ಬಂದಿದೆ ಅನ್ನುವುದಕ್ಕಿಂತ ಸಾರ್ವನಿಕರಿಗೆ ಎಷ್ಟು ಅನುಕೂಲವಾಗಿದೆ ಎಂಬುದು ಮುಖ್ಯ. ಸಾಲ ಪಡೆದ ವ್ಯಕ್ತಿ ಸದ್ಬಳಕೆ ಮಾಡಿಕೊಂಡು ಆರ್ಥಿಕ ಸುಧಾರಣೆ ಹೊಂದಬೇಕು ಎಂದು ಸಲಹೆ ನೀಡಿದರು.
ಸಮಾಜ ನನ್ನ ಮನೆ ಎಂಬ ಭಾವನೆ ಇರಬೇಕು. ಭ್ರಷ್ಟಾಚಾರ ಮಾಡದೆ ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡುವ ವ್ಯಕ್ತಿಗೆ ಸದಾ ಮಾನ್ಯತೆ, ಗೌರವ ಸಿಗುತ್ತದೆಯೇ ಹೊರತು ಹಣ, ಅಧಿಕಾರ ಇದ್ದವನಿಗಲ್ಲ. ಹಿರಿಯರ ಸೇವಾ ಭಾವದಿಂದ ಸಹಕಾರ ಸಂಘ ರಜತ ಮಹೋತ್ಸವ ಆಚರಿಸಿ ಮುನ್ನಡೆಯುತ್ತಿದೆ.
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಸಾಣೇಹಳ್ಳಿ ಮಠ
ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಶಿವ ವಿವಿಧೋದ್ದೇಶ ಸಹಕಾರ ಸಂಘ ಕಟ್ಟುವಲ್ಲಿ ಎಂಪಿಎಂ ನೌಕರರ ಪಾತ್ರ ಪ್ರಮುಖವಾದುದು. ಸಮಾಜದ ಸಹಕಾರವೂ ಸಾಕಷ್ಟಿದೆ. ಸಂಘದಲ್ಲಿ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಷೇರುದಾರರು ಸಹಕಾರ ನಿರಂತರವಾಗಿರಬೇಕು ಎಂದು ತಿಳಿಸಿದರು.
25 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸಂಘದ ಅಧ್ಯಕ್ಷ ಜಿ.ಎಸ್.ಸತೀಶ್ ಮಾತನಾಡಿ, 50 ಜನರು ಒಂದುಗೂಡಿ ಪಾದಯಾತ್ರೆ ಮೂಲಕ ಸಂಗ್ರಹಿಸಿದ 4.30 ಲಕ್ಷ ಷೇರು ಬಂಡವಾಳದಿಂದ 25 ವರ್ಷಗಳ ಅವಧಿಗೆ ಸಂಘ 25 ಕೋಟಿ ರೂ. ವಹಿವಾಟು ನಡೆಸಿದೆ. 1,850 ಷೇರುದಾರರನ್ನು ಹೊಂದಿದೆ ಎಂದರು.
25 ವರ್ಷದ ನೆನಪಿಗಾಗಿ ಬೆಳ್ಳಿ ನಾಣ್ಯ ಅನಾವರಣಗೊಳಿಸಲಾಯಿತು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ.ಶ್ರೀನಿವಾಸ್, ಪದವೀಧರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್, ಸಂಘದ ಸಂಸ್ಥಾಪಕ ಗೌರವಾಧ್ಯಕ್ಷ ಸಿ.ನಾಗಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಚ್.ಎಲ್.ಷಡಕ್ಷರಿ, ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಕೆ.ಜಿ.ಶಾಂತರಾಜ್, ಬಿ.ಕೆ.ಜಗನ್ನಾಥ್, ಎಸ್.ಎನ್.ಕುಮಾರ್, ಎನ್.ಎಸ್.ಮಲ್ಲಿಕಾರ್ಜುನಯ್ಯ, ಎಚ್.ಬಿ.ಸಿದ್ದೇಶ್, ಯಶೋಧಾ ವೀರಭದ್ರಪ್ಪ, ಡಾ. ಬಿ.ಜಿ.ಏಕಾಕ್ಷರಪ್ಪ, ಶಾಂತಾ ಆನಂದ್ ಇತರರಿದ್ದರು.