ಧರ್ಮಸ್ಥಳ ಯೋಜನೆಯಿಂದ ಆರ್ಥಿಕ ಶಿಸ್ತು

09 tth 01
ತೀರ್ಥಹಳ್ಳಿಯ ರಂಜದಕಟ್ಟೆಯಲ್ಲಿ ಏರ್ಪಡಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಒಕ್ಕೂಟ ಪದಗ್ರಹಣ ಕಾರ್ಯಕ್ರಮವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಮುರಳೀಧರ ಶೆಟ್ಟಿ, ಡಾ. ಜೀವಂಧರ್ ಜೈನ್, ಸೊಪ್ಪುಗುಡ್ಡೆ ರಾಘವೇಂದ್ರ ಇತರರಿದ್ದರು.
Published on

ತೀರ್ಥಹಳ್ಳಿ: ಸಮಾಜದಲ್ಲಿ ಸಾಮಾಜಿಕ, ಕೃಷಿ, ಪರಿಸರ, ಆರ್ಥಿಕ ನಿರ್ವಹಣೆ ಮೂಲಕ ಪ್ರಜ್ಞಾವಂತಿಕೆ ಮೂಡಿಸಲು ಕಾರಣ ಆಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳು ರಾಷ್ಟ್ರಮಟ್ಟಕ್ಕೂ ವಿಸ್ತಾರಗೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತಾಲೂಕಿನ ರಂಜದಕಟ್ಟೆಯಲ್ಲಿ ಏರ್ಪಡಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಒಕ್ಕೂಟ ಪದಗ್ರಹಣ, ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಸರ್ಕಾರಗಳು ಜಾರಿಗೆ ತರುವ ಎಷ್ಟೋ ಯೋಜನೆಗಳು ಕಾರ್ಯ ರೂಪಕ್ಕೆ ಬರುವುದು ಕಷ್ಟ. ಆದರೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ನಿರ್ದೇಶನದಂತೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನಪರ ಯೋಜನೆಗಳು ಜಾರಿಗೆ ಬರುತ್ತಿರುವುದು ಪ್ರಶಂಸನೀಯ ಎಂದರು.

ಯೋಜನೆ ಆರ್ಥಿಕ ನೆರವಿನ ಪರಿಣಾಮ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಿದೆ. ಕುಡಿತದ ದುಷ್ಪರಿಣಾಮದಿಂದ ಸಮಾಜಕ್ಕೂ ಹೊರೆ ಆಗುತ್ತಿದ್ದವರನ್ನು ವ್ಯಸನಮುಕ್ತ ಮಾಡುವ ಮೂಲಕ ಹೊಸ ಜೀವನ ರೂಪಿಸಿಕೊಳ್ಳಲು ಕಾರಣರಾಗಿದ್ದಾರೆ ಎಂದು ತಿಳಿಸಿದರು.

ಯೋಜನೆ ಜಿಲ್ಲಾ ನಿರ್ದೇಶಕ ಮುರಳೀಧರ ಶೆಟ್ಟಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಸಾಲ ಕೊಡುವ ಯೋಜನೆ ಮಾತ್ರವಲ್ಲ. ಆರ್ಥಿಕ ವ್ಯವಸ್ಥೆ ಸುಧಾರಣೆ, ನಿರ್ಗತಿಕರಿಗೆ ಮಾಸಾಶನ, ಧಾರ್ಮಿಕ ಕೇಂದ್ರ ಮತ್ತು ಸಮುದಾಯ ಅಭಿವೃದ್ಧಿ, ರುದ್ರಭೂಮಿ ಹಾಗೂ ಡೇರಿಗಳಿಗೆ ಅನುದಾನ, ಸುಜ್ಞಾನನಿಧಿ, ಶಿಷ್ಯವೇತನ ಮುಂತಾದ ಸಮಾಜಮುಖಿ ಕಾರ್ಯಗಳನ್ನು ಹೊಂದಿದೆ ಎಂದು ತಿಳಿಸಿದರು.

ಡಾ. ಜೀವಂಧರ ಜೈನ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ಮುಳುಬಾಗಿಲು ಗ್ರಾಪಂ ಮಾಜಿ ಅಧ್ಯಕ್ಷ ಮೋಹನ್, ಯೋಜನಾಧಿಕಾರಿ ಮಾಲತಿ ದಿನೇಶ್, ಶ್ರೀಧರ್, ರೇಖಾ ದಿನೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net