ಸಾಗರ: ಮನುಷ್ಯರು ಇಲ್ಲದೆ ಸಸ್ಯ ಮತ್ತಿತರ ಜೀವಿಗಳು ಬದುಕಬಲ್ಲವು. ಆದರೆ ಸಸ್ಯಗಳಿಲ್ಲದೆ ಮನುಷ್ಯ ಬದುಕುವುದು ಅಸಾಧ್ಯ ಎಂದು ಪರಿಸರ ಹೋರಾಟಗಾರ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ಸಾಗರದ ಇಂದಿರಾ ಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಅಂತರಕ್ರಿಯಾ ಚಟುವಟಿಕೆ ಕಾರ್ಯಕ್ರಮದಲ್ಲಿ ವೃಕ್ಷರೋಪಣ ನೆರವೇರಿಸಿ ಮಾತನಾಡಿದರು.
ಭೂಮಿ ಮೇಲಿನ ಮೊದಲ ಅತಿಥಿಯಾಗಿರುವ ಸಸ್ಯ ಜೀವಿಗಳ ರಕ್ಷಣೆ ತೀರ ಅಗತ್ಯವಿದೆ. ವೈಜ್ಞಾನಿಕ ವಿವೇಚನೆ ಜತೆಗೆ ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿ ಸಾರ್ವಜನಿಕರ ಮೇಲಿದೆ. ವಿದ್ಯಾರ್ಥಿಗಳು ಸಸ್ಯ ಸಂರಕ್ಷಣೆ ಕಾರ್ಯ ಮಾಡುವ ಜತೆಗೆ ಅಪರೂಪದ ಸಸ್ಯ ಪ್ರಭೇದಗಳನ್ನು ಕಾಪಾಡಿಕೊಂಡು ಬಂದಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಔಷಧ ಸಸ್ಯಗಳ ತಜ್ಞ ಆನೆಗುಳಿ ಸುಬ್ಬರಾವ್ ಮಾತನಾಡಿ, ಸ್ಥಳೀಯ ಔಷಧೀಯ ಸಸ್ಯಗಳನ್ನು ಸಂರಕ್ಷಿಸಿ ಅದರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಅಪರೂಪದ ಸಸ್ಯಗಳನ್ನು ಸಂರಕ್ಷಣೆ ಮಾಡುವ ಮನೋಸ್ಥಿತಿ ವೃದ್ಧಿಯಾಗಬೇಕು. ಮಾನವನ ಆರೋಗ್ಯಪೂರ್ಣ ಬದುಕಿಗೆ ಸಸ್ಯಗಳ ಉಳಿಯುವಿಕೆ ಅಗತ್ಯ ಎಂದರು.
ಇಂದಿರಾ ಗಾಂಧಿ ಕಾಲೇಜು ಆವರಣದ ಸಸ್ಯ ಪ್ರಭೇದಗಳ ದಾಖಲಾತಿ ವರದಿ ಬಿಡುಗಡೆಗೊಳಿಸಲಾಯಿತು. ಮಲೆನಾಡು ಉರಗ ಹಾಗೂ ಸಸ್ಯ ಪ್ರಭೇದಗಳ ಪ್ರಾತ್ಯಕ್ಷಿಕೆ ಮತ್ತು ಸಂವಾದ ನಡೆಯಿತು. ಪ್ರಾಚಾರ್ಯೆ ಡಾ. ಎಚ್.ರಾಜೇಶ್ವರಿ, ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಶಿವಾನಂದ ಎಸ್. ಭಟ್, ಡಾ. ಅಶ್ವಿನಿ, ಕೌಶಿಕ್, ಗಿರೀಶ್ ಜನ್ನೆ, ಡಾ. ಎಂ.ಜಿ.ರಟಗಣ್ಣನವರ್, ಡಾ. ರತ್ನಾಕರ್, ಡಾ. ರಮೇಶ್, ಬಿ.ಎನ್.ಸೌಮ್ಯಾ ಇತರರಿದ್ದರು.