

ಸೊರಬ: ಬಂಗಾರಪ್ಪ ಅಭಿಮಾನಿ ಬಳಗ ಮತ್ತು ಬಂಗಾರಪ್ಪ ಫೌಂಡೇಷನ್ನಿಂದ ಅ.26ರಂದು ಪಟ್ಟಣದ ಬಂಗಾರಧಾಮದಲ್ಲಿ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ 93ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದು ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ ಹೇಳಿದರು.
ಪಟ್ಟಣದ ಬಂಗಾರಧಾಮದಲ್ಲಿ ಮಾಜಿ ಸಿಎಂ ಬಂಗಾರಪ್ಪ ಜನ್ಮದಿನ ನಿಮಿತ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬಂಗಾರಪ್ಪ ಜನ್ಮದಿನದಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಪಟ್ಟಣದಲ್ಲಿ ಅ.26ರಂದು ಸಂಜೆ ಮೂಡಬಿದರೆ ಆಳ್ವಾಸ್ ಶಾಲೆ ಮಕ್ಕಳಿಂದ ನುಡಿಸಿರಿ ಕಾರ್ಯಕ್ರಮ ನಡೆಯಲಿದೆ. ಸಚಿವ ಮುನಿಯಪ್ಪ, ಶಾಸಕ ಆರ್.ವಿ.ದೇಶಪಾಂಡೆ, ಭೀಮಣ್ಣ ನಾಯ್ಕ ಹಾಗೂ ಗೋಪಾಲಕೃಷ್ಣ ಬೇಳೂರು ಪಾಲ್ಗೊಳ್ಳುವರು ಎಂದರು.
ಬಗರ್ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್ ಮಾತನಾಡಿ, ಎಸ್.ಬಂಗಾರಪ್ಪ ವಿಚಾರ ವೇದಿಕೆಯಿಂದ ಬಂಗಾರ ಪ್ರಶಸ್ತಿಗಳಿಗೆ ಪ್ರಮುಖರನ್ನು ಆಯ್ಕೆ ಮಾಡಿದ್ದು ಅ.26ರಂದು ಪಟ್ಟಣದ ಬಂಗಾರಧಾಮದಲ್ಲಿ ಹಿರಿಯ ಸಾಹಿತಿ ಪ್ರೊ. ಕಾಳೇಗೌಡ ನಾಗಾವರ್ ಅವರಿಗೆ ಸಾಹಿತ್ಯ ಬಂಗಾರ ಪ್ರಶಸ್ತಿ, ಹಿರಿಯ ಜನಪದ ಕಲಾವಿದೆ ರಾಧಾಬಾಯಿ ಮಾದರ್ ಅವರಿಗೆ ಜನಪದ ಬಂಗಾರ ಪ್ರಶಸ್ತಿ, ರಂಗಕರ್ಮಿ ಜೇವರ್ಗಿ ರಾಜಣ್ಣ ಅವರಿಗೆ ರಂಗ ಬಂಗಾರ ಪ್ರಶಸ್ತಿ ಹಾಗೂ ಧರ್ಮಪ್ರವರ್ತಕ ಶ್ರೀ ತೋಟದಪ್ಪ ಧರ್ಮ ಸಂಸ್ಥೆಗಳಿಗೆ ಸೇವಾ ಬಂಗಾರ ಪ್ರಶಸ್ತಿ ನೀಡಲಾಗುತ್ತದೆ. ನಾಲ್ವರು ಸಾಧಕರಿಗೆ ಬಂಗಾರ ಪ್ರಶಸ್ತಿ ಜತೆಗೆ ತಲಾ 1 ಲಕ್ಷ ರೂ. ಪ್ರಶಸ್ತಿ ಮೊತ್ತ ನೀಡಲಾಗುವುದು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ, ಅಶೋಕ್, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಪ್ರವೀಣ್, ತಾಪಂ ಮಾಜಿ ಸದಸ್ಯ ನಾಗರಾಜ್, ಹಿರಿಯಪ್ಪ, ಜಯಶೀಲಗೌಡ, ಅಬ್ದುಲ್ ರಶೀದ್, ಸುನಿಲ್ಗೌಡ, ಪ್ರಕಾಶ್, ಶ್ರೀಕಾಂತ್, ಪ್ರಭು, ಸತ್ಯನಾರಾಯಣ, ಸಾಜೀದ್ ಅಹ್ಮದ್, ಜಗದೀಶ್, ಬಸವೇಶ್ವರ, ಸುರೇಶ್ ಇತರರಿದ್ದರು.