ಸಾಗರ: ಯುವಜನತೆ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ನಗರದ ಗಣಪತಿ ದೇವಸ್ಥಾನ ಆವರಣದಲ್ಲಿ ಶ್ರೀ ರಾಮಕೃಷ್ಣ ವಿದ್ಯಾಲಯದಿಂದ ಏರ್ಪಡಿಸಿದ್ದ ಯುವ ಜಯಂತ್ಯುತ್ಸವ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ವಿವೇಕಾನಂದರ ಸಂದೇಶಗಳು ಸಾರ್ವಕಾಲಿಕ. ಅವುಗಳನ್ನು ಪಾಲಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ರಾಣೆಬೆನ್ನೂರು ರಾಮಕೃಷ್ಣ ಆಶ್ರಮದ ಶ್ರೀ ಪ್ರಕಾಶನಂದೀ ಮಹಾರಾಜ್ ಮಾತನಾಡಿ, ಪ್ರತಿ ವಿದ್ಯಾರ್ಥಿಯು ಸ್ವಾಮಿ ವಿವೇಕಾನಂದರ ಕೃತಿಗಳ ಅಧ್ಯಯನ ಮಾಡಬೇಕು. ನನ್ನ ಭರವಸೆ ಯುವಜನರ ಮೇಲೆ ಎನ್ನುವ ಸಂದೇಶ ನೀಡಿದ್ದರು. ಯುವಪೀಳಿಗೆ ಮೇಲೆ ಭರವಸೆ ಇರಿಸಿ ವಿವೇಕಾನಂದರು ನೀಡಿದ ಸಂದೇಶ ಪರಿಪಾಲನೆ ಅಗತ್ಯ. ಮಹಾತ್ಮ ಗಾಂಧಿ, ಸುಭಾಷ್‌ಚಂದ್ರ ಬೋಸ್, ಚಕ್ರವರ್ತಿ ರಾಜಗೋಪಾಲಾಚಾರ್ಯ ಎಲ್ಲರೂ ಸ್ವಾಮಿ ವಿವೇಕಾನಂದರ ಕುರಿತು ಹೇಳಿರುವ ಮಾತುಗಳು ಸದಾ ಸ್ಮರಣೀಯ ಎಂದರು.
ಸ್ವಾಮಿ ವಿವೇಕಾನಂದರ ಜೀವನ ಸಂದೇಶದ ಅಧ್ಯಯನ ಅಗತ್ಯ. ಭಾರತದಲ್ಲಿ ಸಂಸ್ಕೃತಿ, ಸಂಸ್ಕಾರದ ಮಹತ್ವ ಪರಿಚಯಿಸಿದ ಶರಣರು, ಸಂತರು, ದಾರ್ಶನಿಕರ ವಿಚಾರಧಾರೆಗಳನ್ನು ಯುವಜನರಿಗೆ ಪರಿಚಯಿಸುವ ಕೆಲಸ ಆಗಬೇಕು.
ಶ್ರೀ ಪ್ರಕಾಶನಂದೀ ಮಹಾರಾಜ್
ರಾಣೆಬೆನ್ನೂರು ರಾಮಕೃಷ್ಣ ಆಶ್ರಮ
1500 ವಿದ್ಯಾರ್ಥಿಗಳು ವಿವೇಕಾನಂದರ ವೇಷಭೂಷಣ ತೊಟ್ಟ ಯುವಜನೋತ್ಸವ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಾಗರ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಜ್ಞಾನಾನಂದ ಮಹಾರಾಜ್, ಶ್ರೀ ರಾಮಕೃಷ್ಣ ವಿದ್ಯಾಲಯದ ಮುಖ್ಯಸ್ಥ ದೇವರಾಜ್, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ರವಿಕುಮಾರ್, ಲಲಿತಮ್ಮ, ಎಲ್.ಚಂದ್ರಪ್ಪ, ಪ್ರಮುಖರಾದ ಕಲಸೆ ಚಂದ್ರಪ್ಪ, ಜಯರಾಮ್, ಸರಿತಾ ದೇವರಾಜ್, ಗಿರೀಶ್ ಕೋವಿ ಇತರರಿದ್ದರು.