ಸಾಗರ: ಕುಗ್ರಾಮಗಳಲ್ಲಿನ ಶಾಲೆಗಳ ಮಕ್ಕಳಿಗೆ ಶಿಕ್ಷಣಕ್ಕೆ ಅವಶ್ಯವಿರುವ ಸೌಕರ್ಯಗಳನ್ನು ಒದಗಿಸುವುದು ಶ್ರೇಷ್ಠ ಸೇವೆ ಎಂದು ಸಾಗರ ಎಜುಕೇಷನ್ ಸೊಸೈಟಿ ಸಂಚಾಲಕಿ ಮಾನಸಾ ಹೇಳಿದರು.
ತಾಲೂಕಿನ ಮಿಂಚ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಾಗರ ಎಜುಕೇಷನ್ ಸೊಸೈಟಿಯಿಂದ ಶೈಕ್ಷಣಿಕ ಸಾಮಗ್ರಿ ಹಾಗೂ ರೇಷನ್ ಕಿಟ್ ವಿತರಿಸಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು. ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಸರ್ಕಾರಿ ಶಾಲೆಗಳಿಗೆ ದಾನಿಗಳು ಸಿಗುತ್ತಾರೆ. ಆದರೆ ಹಿಂದುಳಿದ ಪ್ರದೇಶಗಳಲ್ಲಿ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸಲು ದಾನಿಗಳು ಮುಂದೆ ಬರಬೇಕು ಎಂದು ತಿಳಿಸಿದರು.
ಸಂಸ್ಥೆ ಮುಖ್ಯಸ್ಥ ಸಂತೋಷ್ ಲಿಂಗನಮಕ್ಕಿ ಮಾತನಾಡಿ, ಗ್ರಾಮೀಣ ಶಾಲಾ ಮಕ್ಕಳಿಗೆ ಸೋಲಾರ್ ದೀಪ, ಸ್ಕೂಲ್‌ಬ್ಯಾಗ್, ರೇಷನ್ ಕಿಟ್ ಹಾಗೂ ಗ್ರೀನ್ ಡೆಸ್ಕ್‌ಗಳನ್ನು ನಮ್ಮ ಸಂಸ್ಥೆಯಿಂದ ವಿತರಿಸಲಾಗುತ್ತಿದೆ. ಈವರೆಗೆ 35 ಗ್ರಾಮೀಣ ಶಾಲೆ ಮಕ್ಕಳಿಗೆ ಅಗತ್ಯ ಶೈಕ್ಷಣಿಕ ಪರಿಕರ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಇರುವುದರಿಂದ ಮಕ್ಕಳಿಗೆ ಸೋಲಾರ್ ದೀಪ ಕೊಡಲಾಗಿದೆ ಎಂದರು. ಸಂಸ್ಥೆ ನಿರ್ದೇಶಕಿ ವಿದ್ಯಾಶ್ರೀ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್, ಶಿಕ್ಷಕರು, ಪಾಲಕರು ಹಾಜರಿದ್ದರು.