ಸಾಗರ: ಸರ್ಕಾರಿ ಸೇವೆಯನ್ನು ಶ್ರದ್ಧೆಯಿಂದ ಮಾಡಿ. ಆಸಕ್ತಿ ಇಲ್ಲದಿದ್ದರೆ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಬಗರ್‌ಹುಕುಂ ಸಮಿತಿ ಸಭೆಯಲ್ಲಿ ಮಾತನಾಡಿ, ಕೆಲಸ ವಿಳಂಬದ ಕುರಿತು ಸಾರ್ವಜನಿಕರಿಂದ ದೂರು ಬಂದರೆ ಸುಮ್ಮನಿರುವುದಿಲ್ಲ. ಕಚೇರಿಗೆ ಅಲೆದಾಡಿಸುವುದು ಸರಿಯಲ್ಲ. ಜನರು ಅನೇಕ ನಿರೀಕ್ಷೆ ಇಟ್ಟುಕೊಂಡು ಕಚೇರಿಗೆ ಬರುತ್ತಾರೆ. ಅವರ ಕೆಲಸ ಮಾಡಿಕೊಡಬೇಕು. ಕೆಲ ನೌಕರರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ತಕ್ಷಣ ಅವರನ್ನು ಕೆಲಸದಿಂದ ವಜಾಗೊಳಿಸಲು ಶಿಫಾರಸು ಮಾಡುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.
ಕಂದಾಯ ಇಲಾಖೆ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳಿವೆ. ಬೇಕಾಬಿಟ್ಟಿ ಕೆಲಸ ಮಾಡಲು ಇದು ಸಂತೆ ಮಾರ್ಕೆಟ್ ಅಲ್ಲ. ಸರ್ಕಾರಿ ಕಚೇರಿಗಳಲ್ಲಿ ಆಡಳಿತ ಯಂತ್ರ ಚುರುಕುಗೊಳಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ತಾಲೂಕಿನಲ್ಲಿ ಬಗರ್‌ಹುಕುಂ ಅಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತಕ್ಷಣ ಪರಿಶೀಲಿಸಿ ಅರ್ಹರಿಗೆ ಭೂ ಮಂಜೂರಾತಿ ಮಾಡಲಾಗುತ್ತದೆ. ಹೊಸದಾಗಿ ಯಾರೂ ಭೂಮಿ ಒತ್ತುವರಿ ಮಾಡಿಕೊಳ್ಳುವಂತಿಲ್ಲ. ಕಾನೂನು ಪ್ರಕಾರ ಹಿಂದೆ ಸಾಗುವಳಿ ಮಾಡಿಕೊಂಡು ಸ್ವಾಧೀನದಲ್ಲಿರುವವರನ್ನು ಭೂಮಂಜೂರಾತಿ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು. ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ, ಬಗರ್‌ಹುಕುಂ ಸಮಿತಿ ಸದಸ್ಯ ಕೆ.ಹೊಳೆಯಪ್ಪ, ರವಿಕುಮಾರ್ ಆನಂದಪುರ, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ ಇತರರಿದ್ದರು.