ಹೊಳೆಹೊನ್ನೂರು: ಗ್ರಾಮದಲ್ಲಿ ಆದ್ಯತೆ ಮೇರೆಗೆ ಲಭ್ಯವಿರುವ ಅನುದಾನದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸೈದರಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಅಣ್ಣಪ್ಪ ಹೇಳಿದರು.

ಸಮೀಪದ ಕುರುಬರ ವಿಠಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ 7 ಲಕ್ಷ ರೂ. ಅನುದಾನದಲ್ಲಿ ಅಕ್ಷರ ದಾಸೋಹ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಶಾಲಾ ಆವರಣದಲ್ಲಿ 4.5 ಲಕ್ಷ ರೂ. ವೆಚ್ಚದ ಹೈಟೆಕ್ ಶೌಚಗೃಹ ಕಾಮಗಾರಿ ಮುಕ್ತಾಯ ಹಂತ ತಲುಪಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯತ್ಯಯ ಆಗದಂತೆ ಮುತುವರ್ಜಿ ವಹಿಸಲು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಜಲಜೀವನ್ ಮಿಷನ್ ಕಾಮಗಾರಿ ಪ್ರಗತಿಯಲ್ಲಿದೆ. ನರೇಗಾ ಯೋಜನೆಯಲ್ಲಿ ಬಾಕ್ಸ್ ಚರಂಡಿ, ಜಲ್ಲಿ ರಸ್ತೆ ನಿರ್ಮಾಣ, ಬಸಿಗಾಲುವೆ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದರು.
ಗ್ರಾಪಂ ಉಪಾಧ್ಯಕ್ಷೆ ಸುಪ್ರಿತಾ, ಶಾಲಾ ಸಮಿತಿ ಅಧ್ಯಕ್ಷ ಲಕ್ಷ್ಮಣ, ಮುಖಂಡರಾದ ಮಾರಪ್ಪ, ಸಿದ್ದಪ್ಪ ಗೌಡ, ರಂಗಪ್ಪ, ಮಲ್ಲೇಶಪ್ಪ, ಮಂಜುಳಾ, ಚಂದ್ರಮ್ಮ, ರತ್ನಮ್ಮ, ಶಾರದಮ್ಮ, ಗಂಗಾಧರ್, ನಂಜುಂಡಪ್ಪ, ಸೋಮಶೇಖರ್, ರವಿಕುಮಾರ್, ಮಂಜುನಾಥ್, ಪ್ರಾಣೇಶ್, ಚಂದ್ರಶೇಖರ್ ಇತರರಿದ್ದರು.