ರಂಗ ಕಲೆ ಉಳಿಸಲು ಸಹಕಾರ ಅಗತ್ಯ

12sor1
ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದ ರವಿ ಕೊರಕೋಡು ಅವರನ್ನು ಸನ್ಮಾನಿಸಲಾಯಿತು. ಬಿ.ಕೆ.ರಾಜಶೇಖರ್, ವೆಂಕಟೇಶ್ ಬೋಡ್ಕೆರ್, ವಿರೂಪಾಕ್ಷಪ್ಪ ಇತರರಿದ್ದರು.
Published on

ಸೊರಬ: ರಂಗಭೂಮಿ ಕಲೆ ಅನೇಕ ಕಲಾವಿದರನ್ನು ಬೆಳೆಸಿ ಜನಮನ್ನಣೆಗೆ ಕೊಂಡೊಯ್ಯುವ ಮೂಲಕ ಯುವ ಪೀಳಿಗೆಗೆ ಮಾರ್ಗದರ್ಶಕವಾಗಿದೆ ಎಂದು ಡಾ. ರಾಜ್‌ಕುಮಾರ್ ಗ್ರಾಮೀಣ ಆಯ್ದ ಸಂಘದ ತಾಲೂಕು ಅಧ್ಯಕ್ಷ ರವಿ ಕೊರಕೋಡು ಹೇಳಿದರು.

ತಾಲೂಕಿನ ಕುಪ್ಪಗಡ್ಡೆಯಲ್ಲಿ ಡಾ. ರಾಜ್‌ಕುಮಾರ್ ಗ್ರಾಮೀಣ ಆಯ್ದ ಕಲಾವಿದರ ಸಂಘದಿಂದ ಕಲಾವಿದರಿಂದ ಕಲಾವಿದರಿಗೆ ಅಭಿನಂದನೆ ಶೀರ್ಷಿಕೆಯಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ರಂಗಭೂಮಿ ಕಲೆ ಉಳಿಸಿ ಬೆಳೆಸಲು ಎಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.

ರಂಗಭೂಮಿ ನಿರ್ದೇಶಕ ಬಿ.ಕೆ.ರಾಜಶೇಖರ್ ಮಾತನಾಡಿ, ಹಿರಿಯರಿಂದ ಬಂದಿರುವ ರಂಗಭೂಮಿ ಕಲೆಯನ್ನು ಪ್ರೋತ್ಸಾಹಿಸಿದಾಗ ಕಲಾವಿದರ ಬದುಕು ಸಾರ್ಥಕವಾಗುತ್ತದೆ. ಸರ್ಕಾರ ಇಂತಹ ಕಲಾವಿದರನ್ನು ಗುರುತಿಸಿ ಗೌರವಿಸಬೇಕು ಎಂದರು.

ಹಿರಿಯ ಕಲಾವಿದ ವೀರಭದ್ರಪ್ಪ ಮಾತನಾಡಿ, ಕಲೆ ಸಾಧಕನ ಸ್ವತ್ತಾಗಿದ್ದು, ಕಠಿಣ ಶ್ರಮದಿಂದ ಸಾಧನೆ ಮಾಡಬಹುದು. ಕಲೆಯನ್ನು ಪ್ರೋತ್ಸಾಹಿಸುವ ಜನರು ದೇವರು ಇದ್ದಂತೆ. ನನ್ನ ಶಿಷ್ಯನಾಗಿ 100ಕ್ಕೂ ಹೆಚ್ಚು ರಂಗಭೂಮಿಯಲ್ಲಿ ನಟಿಸಿದ ರವಿ ಕೊರಕೋಡ ಅವರ ಸಾಧನೆ ಇತರರಿಗೂ ಸ್ಫೂರ್ತಿ ಎಂದು ಹೇಳಿದರು.

ತಬಲ ವಾದಕ ವೆಂಕಟೇಶ್ ಬೊಡ್ಕೆರ್ ಮಾತನಾಡಿ, ನಾಟಕಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತವೆ. ಪ್ರೇಕ್ಷಕರಿಂದ ಪ್ರೀತಿ, ಗೌರವ ದೊರೆತಾಗ ಸಿಗುವ ಆನಂದ ವಿಶೇಷ. ಕಲಾವಿದರು ಒಟ್ಟಾಗಿ ಸದೃಢ ಸಮಾಜ ನಿರ್ಮಾಣ ಮಾಡಲು ಸಂದೇಶ ನೀಡಬೇಕಾಗಿದೆ ಎಂದು ತಿಳಿಸಿದರು.

ಸಂಘದ ಗೌರವಾಧ್ಯಕ್ಷ ವಿರೂಪಾಕ್ಷಪ್ಪ, ಕಲಾವಿದರಾದ ಮಾಲತೇಶ್, ಮಧು, ಧನಂಜಯ, ವಿನಾಯಕ, ಗಂಗಾಧರ, ಬಸವರಾಜ್, ವೀರೇಂದ್ರ, ಸಂತೋಷ್, ಲಿಂಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net