

ಸೊರಬ: ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ 45 ಸಾವಿರ ಕೋಟಿ ರೂ. ಸಿಎಸ್‌ಆರ್ ಫಂಡ್ ತರುವ ಮೂಲಕ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದೇವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ಕಾಸ್ವಾಡಿಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ, ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದೆ. ಅತಿಥಿ ಶಿಕ್ಷಕರ ವೇತನ ಪರಿಷ್ಕರಣೆ ಸೇರಿ ಇತರ ವಿಷಯಗಳ ಬಗ್ಗೆ ಚಿಂತನೆ ಮಾಡಲಾಗಿದೆ. ಕಾಯಂಗೆ ಕಾನೂನಿನಲ್ಲಿ ಅವಕಾಶ ಇರುವ ಬಗ್ಗೆ ಪರಿಶೀಲಿಸಬೇಕಿದೆ ಎಂದು ತಿಳಿಸಿದರು.
ಹಿಂದಿನ ಸರಕಾರ ಅನುದಾನ ಮೀಸಲಿಡದೆ ರೂಪಿಸಿದ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲು ಕಾಂಗ್ರೆಸ್ ಸರ್ಕಾರ 47 ಸಾವಿರ ಕೋಟಿ ಅನುದಾನ ಭರಿಸಿದೆ. ಗ್ಯಾರಂಟಿ ಯೋಜನೆಗಳ ಜತೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಲಾಗಿದೆ ಎಂದರು.
ಗ್ರಾಮದ ಶಿಕ್ಷಕ ಬೂದ್ಯಪ್ಪ, ಪೊಲೀಸ್ ಇಲಾಖೆಯ ಬಿ.ಜಯೇಂದ್ರ, ಆರ್.ವಿನಾಯಕ, ತೋಟಗಾರಿಕೆ ಇಲಾಖೆಯ ಲಕ್ಷ್ಮೀಕಾಂತ್, ಉಪನ್ಯಾಸಕ ಡಾ. ಎಸ್.ಎಂ.ನೀಲೇಶ್ ಅವರನ್ನು ಸನ್ಮಾನಿಸಲಾಯಿತು.
ಸಿಗಂದೂರು ದೇಗುಲದ ಧರ್ಮದರ್ಶಿ ರಾಮಪ್ಪ, ಮಾವಲಿ ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ್, ಚಿಂತಕ ರಾಜಪ್ಪ ಮಾಸ್ತರ್, ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ, ಬಿಇಒ ಆರ್.ಪುಷ್ಪಾ, ಎಸ್‌ಡಿಎಂಸಿ ಅಧ್ಯಕ್ಷ ಸುಜಾತ್‌ಕುಮಾರ್, ದಯಾನಂದ ಕಲ್ಲೇರ್, ನಾಗರಾಜ್, ಮುಖ್ಯಶಿಕ್ಷಕ ದೇವೇಂದ್ರಪ್ಪ, ಶಿಕ್ಷಕಿ ಗಂಗಮ್ಮ, ಮಂಜುನಾಥ್ ಇತರರಿದ್ದರು.