ವಸತಿಗೃಹ ತೆರವುಗೊಳಿಸಿ ವಿಶಾಲ ಆಸ್ಪತ್ರೆ ಕಟ್ಟಡ ನಿರ್ಮಾಣ

17 sgr 1
ಸಾಗರದ ಪ್ರವಾಸಿ ಮಂದಿರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಟಿ.ಪಿ.ರಮೇಶ್, ಶಿವಪ್ರಸಾದ್ ಇತರರಿದ್ದರು.
Published on

ಸಾಗರ: ಸಾಗರ ಉಪವಿಭಾಗೀಯ ಆಸ್ಪತ್ರೆಯನ್ನು 300 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು, 100ರಿಂದ 250 ಬೆಡ್ ಸೌಲಭ್ಯ ಕಲ್ಪಿಸಲು ಆರೋಗ್ಯ ಸಚಿವರ ಸೂಚನೆ ಮೇರೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಆರೋಗ್ಯ ಇಲಾಖೆ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ, ಮೆಸ್ಕಾಂ ಸೇರಿ ಇತರ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ಒಳ ಮತ್ತು ಹೊರ ರೋಗಿಗಳ ಸಂಖ್ಯೆ ಏರಿಕೆ ಆಗುತ್ತಿದೆ. ಪೂರಕ ಸೌಲಭ್ಯ ಕಲ್ಪಿಸಲು ನೀಲಿನಕ್ಷೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಆಸ್ಪತ್ರೆ ಹಿಂಭಾಗದಲ್ಲಿ ಶಿಥಿಲಾವಸ್ಥೆಯಲ್ಲಿರುವ ವಸತಿಗೃಹಗಳನ್ನು ತೆರವುಗೊಳಿಸಿ ವಿಶಾಲವಾದ ಆಸ್ಪತ್ರೆ ನಿರ್ಮಾಣ, ಪ್ರಯೋಗಾಲಯ ಸೇರಿ ವಿವಿಧ ಸೌಲಭ್ಯ ಕಲ್ಪಿಸಲಾಗುವುದು. ರೋಗಿಗಳಿಗೆ ಗುಣಮಟ್ಟದ ಸೌಲಭ್ಯ ಸಿಗಬೇಕು. ತುರ್ತು ಸಂದರ್ಭದಲ್ಲಿ ಎಲ್ಲ ರೀತಿ ಚಿಕಿತ್ಸೆ ದೊರೆಯುವಂತೆ ಆಸ್ಪತ್ರೆ ಅಭಿವೃದ್ದಿಪಡಿಸಲಾಗುತ್ತದೆ. ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ. ಮಂತ್ರಿಗಳು ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ ಎಂದರು.

ಸಾಗರದಲ್ಲಿ ಒಳಚರಂಡಿ ಕಾಮಗಾರಿಗೆ ನಾನು 70 ಕೋಟಿ ರೂ. ಮಂಜೂರು ಮಾಡಿಸಿದ್ದೆ, ಈತನಕ ಕಾಮಗಾರಿ ಮುಗಿದಿಲ್ಲ. ಮತ್ತೆ 20 ಕೋಟಿ ರೂ. ಹೆಚ್ಚುವರಿ ಅನುದಾನ ಮಂಜೂರು ಮಾಡಿಸಿದ್ದು, ಭೂಸ್ವಾಧೀನಕ್ಕೆ 1 ಕೋಟಿ ರೂ. ಬಿಡುಗಡೆಯಾಗಿದೆ. ಹಾಗೆಯೇ ಎಲ್ಲ ರೀತಿಯ ಕಾಮಗಾರಿಗಳಿಗೆ ಆದ್ಯತೆ ನೀಡಿದ್ದೇನೆ. ಗೋಪಾಲಕೃಷ್ಣ ಬೇಳೂರು ಶಾಸಕ

ಗ್ರಾಮೀಣ ಭಾಗದ ಹೆಗ್ಗೋಡು, ಕಲ್ಮನೆ, ಆವಿನಹಳ್ಳಿ ಇತರ ಭಾಗಗಳಿಗೆ ಗುಬ್ಬಗೋಡು ಶರಾವತಿ ಹಿನ್ನೀರಿನಿಂದ ನೀರು ಪೂರೈಕೆ ಮಾಡಲು ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಜಲಜೀವನ್ ಮಿಷನ್ ಕಾಮಗಾರಿ ಕೆಲವೆಡೆ ಕುಂಠಿತವಾಗಿದೆ. ಕೆಲಸ ಮಾಡಲು ಸಾಧ್ಯ ಆಗದಿದ್ದರೆ ಗುತ್ತಿಗೆದಾರರು ಕೆಲಸ ಕೈ ಬಿಡಲಿ, ನಾವು ಬೇರೆಯವರಿಗೆ ವಹಿಸುತ್ತೇವೆ ಎಂದು ತಿಳಿಸಿದರು.

ನೂತನ ಪೈಪ್‌ಲೈನ್: ಸಾಗರದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಕೊಡಬೇಕು ಎನ್ನುವ ಉದ್ದೇಶದಿಂದ ಈ ಹಿಂದೆ ಶಾಸಕನಾಗಿದ್ದಾಗ ಶರಾವತಿ ನದಿ ನೀರಿನಿಂದ ಕುಡಿಯುವ ನೀರು ತರುವ ಯೋಜನೆಗೆ ಹಣ ಬಿಡುಗಡೆ ಮಾಡಿಸಿದ್ದೆ. ಅದು ಸಾಧ್ಯವಾಗಿರಲಿಲ್ಲ ಎಂದು ಗೋಪಾಲಕೃಷ್ಣ ಬೇಳೂರು ಹೇಳಿದರು. ಹಾಗಾಗಿ ದಿನದ 24 ತಾಸು ಕುಡಿಯುವ ನೀರು ಪೂರೈಸಲು 275 ಕೋಟಿ ರೂ. ವೆಚ್ಚದ ಹೊಸ ಯೋಜನೆ ರೂಪಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ 350 ಕಿ.ಮೀ ಹೊಸ ಪೈಪ್‌ಲೈಲ್ ಅಳವಡಿಸಲಾಗುತ್ತದೆ. ಮನೆಮನೆಗೆ ಮೀಟರ್ ಅಳವಡಿಸಿ ನೀರು ಪೂರೈಸಲಾಗುವುದು ಎಂದರು.

ಸಾಗರ ತಾಪಂ ಇಒ ಶಿವಪ್ರಸಾದ್, ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ವಿಶೇಷ ಕರ್ತವ್ಯ ಅಧಿಕಾರಿ ಟಿ.ಪಿ.ರಮೇಶ್, ಸಿವಿಲ್ ಸರ್ಜನ್ ಡಾ. ಕೆ.ಪರಪ್ಪ, ನೀರು ನೈರ್ಮಲ್ಯ ಇಲಾಖೆಯ ಗುರುಕೃಷ್ಣ ಶೆಣೈ, ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net