

ಸಾಗರ: ಸುಸ್ಥಿರ ಬದುಕು ಕಟ್ಟಿಕೊಳ್ಳಲು ವೈಯಕ್ತಿಕ ಮತ್ತು ಸಾಂಘಿಕ ಚಿಂತನೆ ಎರಡೂ ಮುಖ್ಯವಾಗುತ್ತದೆ. ಅವೆರಡರಲ್ಲೂ ಸಮನ್ವಯ ಇದ್ದಾಗ ಮಾತ್ರ ಬದಲಾವಣೆ ಕಾಣಲು ಸಾಧ್ಯ ಎಂದು ಪರಿಸರ ವಿಜ್ಞಾನಿ ಪ್ರಸನ್ನ ಆಡುವಳ್ಳಿ ಹೇಳಿದರು.
ಸಮೀಪದ ಹೆಗ್ಗೋಡು-ಹೊನ್ನೇಸರದ ಚರಕ ಸಂಸ್ಥೆಯ ಚರಕ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಹವಾಮಾನ ವೈಪರೀತ್ಯ ಹಾಗೂ ಸುಸ್ಥಿರ ಬದುಕು ಕುರಿತು ಮಾತನಾಡಿ, ಹವಾಮಾನ ಬದಲಾವಣೆಗೆ ಸರ್ಕಾರಗಳು ಹೇಗೆ ಪ್ರತಿಕ್ರಿಯಿಸುತ್ತವೆ. ಖಾಸಗಿ, ಸ್ಥಳೀಯ ಸಂಸ್ಥೆಗಳ ನೀತಿ-ನಿರೂಪಣೆಗಳು ಯಾವ ರೀತಿ ಇವೆ ಎಂಬುದು ಬಹಳ ಮುಖ್ಯವಾಗುತ್ತದೆ. ಎಲ್ಲರೂ ಒಟ್ಟಾಗಿ ಯೋಚಿಸಬೇಕಿದೆ ಎಂದು ತಿಳಿಸಿದರು.
ಹವಾಮಾನ ಬದಲಾವಣೆಯಿಂದ ತಪ್ಪಿಸಿಕೊಳ್ಳುವುದು ಉಳ್ಳವರಿಗೆ ಸುಲಭ. ಆದರೆ ಜನಸಾಮಾನ್ಯರಿಗೆ ಬದಲಾವಣೆ ಪ್ರಭಾವ ಹೆಚ್ಚು ಬೀಳುತ್ತದೆ. ಆಗುವ ಅಪಾಯಗಳಿಂದ ಪಲಾಯನವಾದ ಮಾಡಲು ಸಾಧ್ಯವಿಲ್ಲ, ತಪ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಸುಸ್ಥಿರ ಬದುಕು ಮುನ್ನಡೆಸುವಲ್ಲಿ ಸವಾಲುಗಳನ್ನು ಎದುರಿಸಿ ಹೆಜ್ಜೆ ಇಡಬೇಕು ಎಂದರು.
ಹವಾಮಾನ ಬದಲಾವಣೆ ಜಾಗತಿಕವಾಗಿ ಆದರೂ ಅದರ ಪರಿಣಾಮ ಸ್ಥಳೀಯವಾಗಿ ಆಗುತ್ತದೆ. ಇದು ಈಗಾಗಲೇ ಎಲ್ಲರ ಅರಿವಿಗೂ ಬರುತ್ತಿದೆ. ಇರುವುದು ಒಂದೇ ಭೂಮಿ. ಕೋಟ್ಯಂತರ ಜೀವಿಗಳಲ್ಲಿ ಮನುಷ್ಯನೂ ಒಬ್ಬ. ಇರುವುದೊಂದೇ ಭೂಮಿ, ಅದನ್ನು ವ್ಯವಸ್ಥಿತವಾಗಿ ಉಳಿಸಿಕೊಂಡು ಮನುಷ್ಯ ತನ್ನ ಬದುಕನ್ನು ಮುನ್ನಡೆಸಬೇಕಿದೆ. ಪ್ರಸನ್ನ ಆಡುವಳ್ಳಿ ಪರಿಸರ ವಿಜ್ಞಾನಿ
ವಿನ್ಯಾಸ ತಜ್ಞ ಶ್ರೀಧರ ಕಲ್ಲಹಳ್ಳ ಮಾತನಾಡಿ, ಹವಾಮಾನ ವೈಪರೀತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಹಲವು ದೇಶಗಳೆಲ್ಲ ಸೇರಿ ಒಂದು ಹೊಂದಾಣಿಕೆಯಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ಹೊತ್ತಿನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆ ಮುಂಬರುವ ಅಪಾಯದ ಬಹುದೊಡ್ಡ ಸುನಾಮಿ ಅಲೆಗಳಂತೆ ಕಾಣುತ್ತಿವೆ. ಮುಂದಿನ ಯುವ ಜನಾಂಗದ ಸ್ಥಿತಿ ಏನು ಎಂಬುದು ಅರಿವಿಗೆ ಬರುತ್ತಿಲ್ಲ ಎಂದು ಹೇಳಿದರು.
ಮಣ್ಣಿನಲ್ಲಿ ಮನೆ ಕಟ್ಟಬೇಕೆಂಬ ಫ್ಯಾಷನ್ ಆದರೆ ಪ್ರಯೋಜನವಿಲ್ಲ. ಇದು ಜನಸಾಮಾನ್ಯರ ಸುಲಭದ ಬದುಕಿನ ರೀತಿ ಆದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ಇಲ್ಲದಿದ್ದರೆ ಇದು ಬರೀ ಶ್ರೀಮಂತರ ತೋರಗಾಣಿಕೆಯ ವ್ಯವಸ್ಥೆಯಾಗುತ್ತದೆ. ನೆಲಮೂಲದಲ್ಲಿ ಇದರ ಬಗ್ಗೆ ಚಿಂತನೆ ನಡೆಯಬೇಕು ಎಂದು ತಿಳಿಸಿದರು.
ಕೃಷಿಕ ಸೀತಾರಾಂ ಕುರುವರಿ ಮಾತನಾಡಿ, ಬದುಕಿನ ತಪ್ಪು ಪಾಠಗಳಲ್ಲಿ ನಾವು ಸಿಕ್ಕಿಹಾಕಿಕೊಂಡಿದ್ದೇವೆ. ನಮಗೆ ಬೇರೆ ಆಯ್ಕೆಗಳಿಲ್ಲ. ಮಾದರಿಗಳು ಗಟ್ಟಿಯಾಗಿ ನಿಲ್ಲುತ್ತಿಲ್ಲ. ಜಾಗತಿಕ ವ್ಯವಸ್ಥೆ, ಆಧುನಿಕ ತಂತ್ರಜ್ಞಾನ ಬೇಗ ಹಣ ಮಾಡುವ ತವಕದಲ್ಲಿ ನೈಸರ್ಗಿಕ ಬದುಕನ್ನೇ ಕಳೆದುಕೊಳ್ಳುತ್ತಿದ್ದೇವೆ. ಕಟ್ಟುವುದಕ್ಕಿಂತ ಕಳೆದುಕೊಳ್ಳುವಲ್ಲಿಯೇ ಹೆಚ್ಚು ತೊಡಗಿಕೊಳ್ಳುತ್ತಿರುವುದು ಅಪಾಯದ ಸಂಕೇತ ಎಂದರು.
ಸಂವಾದದಲ್ಲಿ ಗ್ರಾಮ ಸೇವಾ ಸಂಘದ ಹಿರಿಯ ಸಲಹೆಗಾರ ವೆಂಕಟನಾಥನ್, ಸಾರ ಸಂಸ್ಥೆಯ ಧನುಷ್, ಸಾಮಾಜಿಕ ಕಾರ್ಯಕರ್ತೆ ಪೋಶಿಣಿ, ಚರಕದ ಬಣ್ಣಗಾರಿಕೆ ವಿಭಾಗದ ವ್ಯವಸ್ಥಾಪಕ ರುದ್ರಪ್ಪ, ಸಿಇಒ ಟೆರೆನ್ಸ್ ಪೀಟರ್, ಕೃಷಿಕ ಪ್ರಭಾಕರ ಸಾಂಶಿ ಪಾಲ್ಗೊಂಡಿದ್ದರು. ಚರಕದ ವಿನ್ಯಾಸ ವಿಭಾಗದ ಮುಖ್ಯಸ್ಥೆ ಪದ್ಮಶ್ರೀ ಸಂವಾದ ನಡೆಸಿಕೊಟ್ಟರು.