ಹೊಳೆಹೊನ್ನೂರು: ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಕೆನರಾ ಬ್ಯಾಂಕ್ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ ಎಂದು ಸನ್ಯಾಸಿಕೋಡಮಗ್ಗೆ ಗ್ರಾಮದ ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಎಂ.ಸಂತೋಷ್ ಹೇಳಿದರು.
ಸಮೀಪದ ಸನ್ಯಾಸಿಕೋಡಮಗ್ಗೆ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಕೆನರಾ ಬ್ಯಾಂಕ್‌ನಿಂದ ಅಳವಡಿಸಿರುವ ಸಿಸಿ ಕ್ಯಾಮರಾ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ, ಬ್ಯಾಂಕ್‌ನ ಲಾಭಾಂಶದಲ್ಲಿ ಶೇ.2ರಷ್ಟು ಹಣವನ್ನು ಸೇವಾ ಚಟುವಟಿಕೆಗಳಿಗೆ ವಿನಿಯೋಗಿಸಲಾಗುತ್ತದೆ. ಆರ್ಥಿಕ ವರ್ಷದಲ್ಲಿ 14,500 ಕೋಟಿ ರೂ. ಲಾಭ ಗಳಿಸಿದ್ದು ಅಂದಾಜು 300 ಕೋಟಿ ರೂ. ಸೇವಾ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳನ್ನು ಗುರುತಿಸಿ ಅಗತ್ಯ ವಸ್ತುಗಳ ಕೊಡುಗೆ ನೀಡಲಾಗುತ್ತಿದೆ. ಸನ್ಯಾಸಿಕೋಡಮಗ್ಗೆ ಶಾಖೆಯು ಪ್ರಸಕ್ತ ಸಾಲಿನಲ್ಲಿ 76 ಕೋಟಿ ರೂ. ವ್ಯವಹಾರ ನಡೆಸಿದೆ ಎಂದರು. ಗ್ರಾಪಂ ಸದಸ್ಯ ಕೆ.ಇ.ಪ್ರಕಾಶ್ ಮಾತನಾಡಿ, ಶಾಲೆ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು ವಿದ್ಯಾರ್ಥಿಗಳ ಸುರಕ್ಷತೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶಪ್ಪ ಮಾತನಾಡಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವುದು ಶ್ಲಾಘನೀಯ ಕಾರ್ಯ ಎಂದು ಸಲಹೆ ನೀಡಿದರು. ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಇ.ಪ್ರಶಾಂತ್, ಮುಖ್ಯಶಿಕ್ಷಕ ಜಿ.ಕೊಟ್ರಪ್ಪ, ಕೆನರಾ ಬ್ಯಾಂಕ್ ಸಿಬ್ಬಂದಿ ಎ.ಶಿವರಾಜ್, ಎಸ್‌ಡಿಎಂಸಿ ಅಧ್ಯಕ್ಷ ಜಿ.ಎನ್.ಕಲ್ಲೇಶಪ್ಪ, ದಿವಾಕರ್, ದೀಪಕ್, ಸಿ.ಕೆ.ಭುವನೇಶ್ವರಿ, ಜಿ.ಆರ್.ಉಷಾ, ಎನ್.ಸಿ.ಚಂಪಕಲಾ, ಎಸ್.ಉಷಾ ಇತರರಿದ್ದರು.