ಕಾರ್ಗಲ್: ಸಮಯಪ್ರಜ್ಞೆಯಿಂದ ಎರಡು ಜೀವ ಕಾಪಾಡಲು ಕಾರಣರಾದ ಭಾರಂಗಿ ಹೋಬಳಿ ಅರಳಗೋಡು ಗ್ರಾಪಂ ವ್ಯಾಪ್ತಿ ಆರೋಡಿ ಗ್ರಾಮದ ಇಬ್ಬರು ಬಾಲಕರಿಗೆ ರಾಜ್ಯಮಟ್ಟದಲ್ಲಿ ನೀಡುವ ಹೊಯ್ಸಳ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಗರದ ರಾಮಕೃಷ್ಣ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಎಲ್.ನಿಶಾಂತ್, ಬಿಳಗಾರು ಶಾಲೆ 8ನೇ ತರಗತಿ ವಿದ್ಯಾರ್ಥಿ ಅಶ್ವಿನ್ ಆಟವಾಡುವ ವೇಳೆ ಸಮೀಪದ ಬಾವಿಯೊಂದರಲ್ಲಿ ಹಸು ಬಿದ್ದಿರುತ್ತದೆ. ದನವನ್ನು ಕಾಪಾಡಲು ಗ್ರಾಮದ ಗೋಪಾಲ್(65) ಎಂಬುವವರು ಹಗ್ಗವನ್ನು ಇಳಿಬಿಟ್ಟು ದನವನ್ನು ಮೇಲಕ್ಕೆ ಎಳೆಯಲು ಪ್ರಯತ್ನಿಸುವ ಸಂದರ್ಭದಲ್ಲಿ ಹಗ್ಗ ತುಂಡಾಗಿ ಅವರು ಕೂಡ ಆಕಸ್ಮಿಕವಾಗಿ ಬಾವಿಯೊಳಗೆ ಬೀಳುತ್ತಾರೆ. ಇಬ್ಬರು ಬಾಲಕರು ಗಮನಿಸಿ ಕಾಪಾಡುವಂತೆ ಕೂಗಿಕೊಂಡಿದ್ದು ಗ್ರಾಮದ ಜನರು ಆಗಮಿಸಿ ಗೋಪಾಲ್ ಹಾಗೂ ದನವನ್ನು ರಕ್ಷಿಸುತ್ತಾರೆ.
ಬೆಂಗಳೂರಿನಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಶೌರ್ಯ ಪ್ರಶಸ್ತಿಯನ್ನು ಮಕ್ಕಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರದಾನ ಮಾಡಿದರು. ಎಲ್.ನಿಶಾಂತ್ ಆರೋಡಿ ಗ್ರಾಮದ ಜಿ.ಲಿಂಗರಾಜ್ ಮತ್ತು ಶ್ರೀದೇವಿ ದಂಪತಿ ಪುತ್ರ. ಅಶ್ವಿನ್ ಜಿ.ನಾಗರಾಜ್ ಮತ್ತು ಭಾನುಮತಿ ದಂಪತಿ ಪುತ್ರ.