

ತೀರ್ಥಹಳ್ಳಿ: ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಬಂಟ ಸಮುದಾಯ ಹೆಚ್ಚಿನ ಆದ್ಯತೆ ನೀಡಬೇಕು. ಬೆಂಗಳೂರು ಬಂಟರ ಸಂಘ ಸಮುದಾಯದ ಹಿತಕ್ಕೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಬೆಂಗಳೂರು ಬಂಟರ ಸಂಘದ ವಿದ್ಯಾರ್ಥಿ ವೇತನ ವಿಭಾಗದ ಮುಖ್ಯಸ್ಥ ಉಮೇಶ್ಕುಮಾರ್ ಶೆಟ್ಟಿ ಹೇಳಿದರು.
ತಾಲೂಕು ಬಂಟರ ಸಂಘದದಿಂದ ಸೌರಮಾನ ಯುಗಾದಿ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಬಂಟರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿ, ಬೆಂಗಳೂರು ಬಂಟರ ಸಂಘ ಪ್ರತಿ ವರ್ಷ ಒಂದು ಕೋಟಿ ರೂ. ವಿದ್ಯಾರ್ಥಿ ವೇತನ ನೀಡುತ್ತಿದ್ದು, ಸಮಾಜದ ಬಡ ಹೆಣ್ಣುಮಕ್ಕಳ ಮದುವೆಗೆ 50 ಲಕ್ಷ ರೂ. ಮತ್ತು ಬಡವರ ಆರೋಗ್ಯ ಚಿಕಿತ್ಸೆಗೆ 25 ಲಕ್ಷ ರೂ. ಮೀಸಲಿಟ್ಟಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಡಿ.ಎಸ್.ವಿಶ್ವನಾಥ ಶೆಟ್ಟಿ ಮಾತನಾಡಿ, ತಾಲೂಕು ಬಂಟರ ಸಂಘ ಸಮಾಜದ ಇತರರೊಂದಿಗೆ ಸೌಹಾರ್ದದಿಂದ ಬೆರೆತಿದೆ. ಬಂಟ ಸಮುದಾಯದ ಮಕ್ಕಳನ್ನು ಮಾನವ ಸಂಪತ್ತಾಗಿ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದರು.
ಸಂಘದ ತಾಲೂಕು ಅಧ್ಯಕ್ಷ ಬಿ.ಎಲ್.ಪ್ರಭಾಕರ್ ಹೆಗಡೆ ಮಾತನಾಡಿ, ಸಮಾಜದ ಹಿತಕ್ಕಾಗಿ ದುಡಿಯುತ್ತಿರುವ ಸಂಘದ ಚಟುವಟಿಕೆಗೆ ಪ್ರತಿಯೊಬ್ಬ ಸದಸ್ಯರ ಬೆಂಬಲ ಅಗತ್ಯ ಎಂದು ತಿಳಿಸಿದರು. ಸೌರಮಾನ ಯುಗಾದಿ ಹಬ್ಬದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ ಮತ್ತು ಸಾಮೂಹಿಕ ಭೋಜನ ಆಯೋಜಿಸಲಾಗಿತ್ತು. ಸಂಘದಿಂದ ಶ್ರೀ ರಾಮೇಶ್ವರ ದೇವರ ಪುರೋತ್ಸವ ಏರ್ಪಡಿಸಲಾಗಿತ್ತು.