

ಹೊಳೆಹೊನ್ನೂರು: ಗ್ರಾಮಾಂತರ ಕ್ಷೇತ್ರದಲ್ಲಿ ಬಗರ್‌ಹುಕುಂ ಸಮಸ್ಯೆ ಹೆಚ್ಚಾಗುತ್ತಿದ್ದು, ಬಹುತೇಕ ಪ್ರಕರಣಗಳಲ್ಲಿ ಅರಣ್ಯ ಸಿಬ್ಬಂದಿ ಹಾಗೂ ರೈತರ ಸಂಘರ್ಷ ತಾರಕಕ್ಕೇರಿವೆ ಎಂದು ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಹೇಳಿದರು.
ಸಮೀಪದ ಮಾರಶೆಟ್ಟಿಹಳ್ಳಿಯಲ್ಲಿ ಆಯೋಜಿಸಿದ್ದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಎಲ್ಲಿಯೂ ಇಲ್ಲದ ಅರಣ್ಯ ಸಮಸ್ಯೆ ಗ್ರಾಮಾಂತರದಲ್ಲಿ ಹೆಚ್ಚಾಗಿದೆ. ಅರಣ್ಯದಂಚಿನ ರೈತರ ಸಂಕಷ್ಟಗಳು ದೂರವಾಗುತ್ತಿಲ್ಲ ಎಂದು ತಿಳಿಸಿದರು.
ಮಳೆಗಾಲ ಆರಂಭ ಆಗಿರುವುದರಿಂದ ಜನತೆ ಆರೋಗ್ಯ ಕಾಳಜಿ ವಹಿಸಬೇಕು. ತಾಲೂಕು ವೈದ್ಯಾಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಇಲ್ಲದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಸರ್ಕಾರಿ ಕಚೇರಿಗೆ ಜನರು ಅಲೆಯುವುದು ತಪ್ಪಬೇಕು. ಗ್ರಾಮ ಲೆಕ್ಕಿಗರು ಹಳ್ಳಿಗಳಲ್ಲಿ ಲಭ್ಯಇರುವಂತೆ ನೋಡಿಕೊಳ್ಳಬೇಕು ಎಂದರು.
ಅರಣ್ಯ ಇಲಾಖೆ ಸಿಬ್ಬಂದಿ ರೈತರಿಗೆ ಬೆನ್ನುಬಿದ್ದ ಬೇತಾಳನಂತೆ ಕಾಡುತ್ತಿದ್ದಾರೆ. ನೂರಾರು ವರ್ಷ ಉಳುಮೆ ಮಾಡಿಕೊಂಡು ಬಂದ ಜಮೀನುಗಳನ್ನು ತೆರವುಗೊಳಿಸಲು 3,000 ರೈತರಿಗೆ ನೋಟಿಸ್ ಜಾರಿ ಮಾಡಿ ಕಾನೂನು ಹೋರಾಟ ಆರಂಭಿಸಿದ್ದಾರೆ. ಅರಣ್ಯದಂಚಿನ ಗ್ರಾಮಸ್ಥರು ಭೂಮಿ ಹಕ್ಕು ಉಳಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಕೆಲ ರೈತರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಇಲಾಖೆಗಳಿಗೆ ಸಂಬಂಧಿಸಿ 80ಕ್ಕೂ ಹೆಚ್ಚು ಫಲಾನುಭವಿಗಳು ಅರ್ಜಿ ಸಲ್ಲಿಸಿದರು. ರಸ್ತೆ, ಬಾಕ್ಸ್ ಕಾಲುವೆ ನಿರ್ಮಾಣ ಸೇರಿ ಸ್ಮಶಾನ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಅರ್ಜಿ ಹೆಚ್ಚಿದ್ದವು. ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್, ತಹಸೀಲ್ದಾರ್ ಪರುಶುರಾಮ್, ಉಪವಲಯ ಅರಣ್ಯಾಧಿಕಾರಿ ಉಷಾ, ತಾಲೂಕು ವೈದ್ಯಾಧಿಕಾರಿ ಅಶೋಕ್, ಪಪಂ ಮುಖ್ಯಾಧಿಕಾರಿ ಮಂಜುನಾಥ್, ಗ್ರಾಪಂ ಅಧ್ಯಕ್ಷ ಕಿರಣ್‌ಕುಮಾರ್, ಉಪ ತಹಸೀಲ್ದಾರ್ ವಿಜಯ್, ರಾಜಸ್ವ ನಿರೀಕ್ಷಕ ರಾಜು ಇತರರಿದ್ದರು.